

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಕಲ್ಯಾಣನಗರ ನಿವಾಸಿ ರಾಮಾ ಕುಲಕರ್ಣಿ ಅವರು ಗೋಪಾಲ್ ಜೋಶಿ ವಿರುದ್ಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಗೋಪಾಲ್ ಜೋಶಿ ಅವರಿಂದ ಬೆದರಿಕೆ ಇದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಗೋಪಾಲ್ ಜೋಶಿ ಅವರು ಕೂಡ ರಾಮಾ ಕುಲಕರ್ಣಿ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ತಮ್ಮಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಅವರು ಪ್ರತಿದೂರು ದಾಖಲಿಸಿದ್ದಾರೆ.
ರಾಮಾ ಕುಲಕರ್ಣಿ ಅವರ ದೂರಿನ ಪ್ರಕಾರ, 2022ರ ಮೇ 29ರಂದು ಗೋಪಾಲ್ ಜೋಶಿ ಅವರು ಮಾಳಮಡ್ಡಿಯ ಪೂರ್ಣ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿರುವ 10ನೇ ಸಂಖ್ಯೆಯ ತಮ್ಮ ಫ್ಲ್ಯಾಟ್‌ಗೆ ಭೇಟಿ ನೀಡಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಾವು ಧ್ವನಿ ಎತ್ತಿದಾಗ ತಮ್ಮ ಹಾಗೂ ಕುಟುಂಬದವರ ಜೀವಕ್ಕೆ ಬೆದರಿಕೆ ಹಾಕಲಾಗಿತ್ತು. ಕಿರುಕುಳವನ್ನು ಸಹಿಸಲಾಗದ ಸ್ಥಿತಿಗೆ ತಲುಪಿದಾಗ ಕುಟುಂಬ ಸದಸ್ಯರೊಂದಿಗೆ ಈ ವಿಚಾರ ಚರ್ಚಿಸಿ, ಅವರ ಸಲಹೆಯಂತೆ ಪೊಲೀಸ್ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ.
ಹಣಕ್ಕಾಗಿ ಬೆದರಿಸಿ, ಮಾನಸಿಕ ಕಿರುಕುಳ ನೀಡಿದ್ದಾರೆ: ಗೋಪಾಲ್ ಜೋಶಿ
ಈ ನಡುವೆ ರಾಮಾ ಕುಲಕರ್ಣಿ ಅವರು ತಮ್ಮ ಮಾನಹಾನಿ ಮಾಡುವುದಾಗಿ ಬೆದರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗೋಪಾಲ್ ಜೋಶಿ ತಮ್ಮ ಪ್ರತಿದೂರಿನಲ್ಲಿ ಆರೋಪಿಸಿದ್ದಾರೆ.
ಹಲವು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ತಾವು ಹಣ ನೀಡಲು ಒಪ್ಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ಹಣ ವಸೂಲಿ ಮಾಡುವ ಪ್ರಯತ್ನವಾಗಿದ್ದು, ಮಹಿಳೆ ಮಾಡಿರುವ ಆರೋಪಗಳು ಸುಳ್ಳು ಎಂದು ಗೋಪಾಲ್ ಜೋಶಿ ಪ್ರತಿದೂರಿನಲ್ಲಿ ತಿಳಿಸಿದ್ದಾರೆ. ಬದಲಾಗಿ ರಾಮಾ ಅವರೇ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಲು ತನಿಖಾಧಿಕಾರಿ ನಿರಾಕರಿಸಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.