ಪರಪ್ಪನ ಅಗ್ರಹಾರ ಮೇಲೆ ದಾಳಿ ನಡೆಸಲು ನಾನೇ ಆದೇಶ ನೀಡಿದ್ದೆ, ಪ್ರಜ್ವಲ್ ರೇವಣ್ಣ ಕೇಸಿನ ಬಗ್ಗೆ ತನಿಖೆ: ಪ್ರಿಯಾಂಕ್ ಖರ್ಗೆ-Video

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅನುಮತಿ ಪಡೆದ ಬಳಿಕ ಸುಮಾರು 100 ಮಂದಿ ಕೇಂದ್ರ ಅಪರಾಧ ವಿಭಾಗದ (CCB) ಸಿಬ್ಬಂದಿಯನ್ನು ದಾಳಿಗೆ ನಿಯೋಜಿಸಲಾಗಿತ್ತು. ಈ ವೇಳೆ ಹಲವು ಲೋಪಗಳು ಪತ್ತೆಯಾಗಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Priyank Kharge and Prajwal Revanna
ಪ್ರಿಯಾಂಕ್ ಖರ್ಗೆ-ಪ್ರಜ್ವಲ್ ರೇವಣ್ಣ
Updated on

ಬೆಂಗಳೂರು: ಇತ್ತೀಚಿನ ಭೇಟಿ ವೇಳೆ ಆಡಳಿತಾತ್ಮಕ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ದಾಳಿ ನಡೆಸಲು ತಾನು ಆದೇಶಿಸಿದ್ದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತಿಳಿಸಿದ್ದಾರೆ. ರಾಜ್ಯದ ಇತರ ಕಾರಾಗೃಹಗಳಲ್ಲೂ ಇದೇ ರೀತಿಯ ತಪಾಸಣೆಗಳನ್ನು ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕಾರಾಗೃಹದ ಅಧಿಕಾರಿಗಳ ಪ್ರಕಾರ, ಮಾಜಿ ಸಂಸದ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಬಳಿ ದಾಳಿ ವೇಳೆ ಸ್ಮಾರ್ಟ್‌ಫೋನ್ ಪತ್ತೆಯಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅನುಮತಿ ಪಡೆದ ಬಳಿಕ ಸುಮಾರು 100 ಮಂದಿ ಕೇಂದ್ರ ಅಪರಾಧ ವಿಭಾಗದ (CCB) ಸಿಬ್ಬಂದಿಯನ್ನು ದಾಳಿಗೆ ನಿಯೋಜಿಸಲಾಗಿತ್ತು. ಈ ವೇಳೆ ಹಲವು ಲೋಪಗಳು ಪತ್ತೆಯಾಗಿವೆ ಎಂದು ಖರ್ಗೆ ಹೇಳಿದರು.

ಕಾರಾಗೃಹದೊಳಗಿನ ನಿಯಮ ಉಲ್ಲಂಘನೆಗಳಿಗೆ ಸಹಕರಿಸಿದ ಶಂಕಿತ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Priyank Kharge and Prajwal Revanna
ಸಜಾ ಕೈದಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ದರ್ಶನ್ ಬ್ಯಾರಕ್ ನಲ್ಲೂ ಶೋಧ!

ಸಿಸಿಬಿ ದಾಳಿ ಸ್ವಯಂಪ್ರೇರಿತವಾಗಿ ನಡೆದದ್ದಲ್ಲ; ನಾನು ಆದೇಶಿಸಿದ್ದೆ. ಯಾವುದೇ ಕಾರಾಗೃಹದಲ್ಲಿ ದಾಳಿ ನಡೆಸಬೇಕಾದರೆ ಗೃಹ ಸಚಿವರ ಆದೇಶ ಇರಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

ಎರಡು-ಮೂರು ವಾರಗಳ ಹಿಂದೆ ತಾವು ಕಾರಾಗೃಹಕ್ಕೆ ಭೇಟಿ ನೀಡಿದ್ದಾಗ “ಕೆಲವು ಲೋಪಗಳು” ಕಂಡುಬಂದಿದ್ದವು. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ದಾಳಿ ನಡೆಸಲು ಮುಖ್ಯಮಂತ್ರಿಯವರ ಅನುಮತಿ ಪಡೆದಿದ್ದಾಗಿ ಹೇಳಿದರು.

ಅಲ್ಲಿನ ವ್ಯವಸ್ಥೆ ಮತ್ತು ಸಿದ್ಧತೆಗಳ ಬಗ್ಗೆ ಪರಿಶೀಲಿಸಲು ಸುಮಾರು 100 ಸಿಸಿಬಿ ಸಿಬ್ಬಂದಿಯನ್ನು ಕಳುಹಿಸಿದ್ದೆವು. ಸಾಕಷ್ಟು ಲೋಪಗಳು ಪತ್ತೆಯಾಗಿವೆ. ಈಗಾಗಲೇ ಕ್ರಮವನ್ನೂ ಕೈಗೊಂಡಿದ್ದೇವೆ ಎಂದು ಹೇಳಿದರು.

ನಿಯಮ ಉಲ್ಲಂಘನೆಗಳಿಗೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ತಾವು ಆದೇಶಿಸಿದ್ದಾಗಿ ಹೇಳಿದರು.

ನಮ್ಮ ಇಲಾಖೆಯಲ್ಲಿ ಇನ್ನೂ ತಮ್ಮ ಹಳೆಯ ರೀತಿಯ ಕಾರ್ಯವೈಖರಿಯನ್ನು ಬಿಟ್ಟುಕೊಡದ ಕೆಲವು ಅಧಿಕಾರಿಗಳಿದ್ದಾರೆ. ಅವರೆಲ್ಲರನ್ನು ಗುರುತಿಸಿ, ಅವರ ವಿರುದ್ಧ ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈ ಕ್ರಮ ಕೇವಲ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸೀಮಿತವಾಗುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಇದು ಕೇವಲ ಪರಪ್ಪನ ಅಗ್ರಹಾರ ಜೈಲಿಗೆ ಸೀಮಿತವಾಗುವುದಿಲ್ಲ; ನಮ್ಮ ಎಲ್ಲ ಕಾರಾಗೃಹಗಳಲ್ಲೂ ಇದೇ ರೀತಿಯ ಕ್ರಮ ನಡೆಯಲಿದೆ. ಯಾವಾಗ, ಎಲ್ಲಿ ಅಥವಾ ಏನು ಮಾಡುತ್ತೇವೆ ಎಂಬುದನ್ನು ನಾನು ನಿಮಗೆ ಹೇಳುವುದಿಲ್ಲ. ಅದು ಕಲಬುರಗಿ ಜೈಲಾಗಿರಬಹುದು, ಬೆಳಗಾವಿಯಾಗಿರಬಹುದು, ಬೆಂಗಳೂರಾಗಿರಬಹುದು ಅಥವಾ ಬೇರೆ ಎಲ್ಲಿಯಾದರೂ ಆಗಿರಬಹುದು. ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಕಾರಾಗೃಹಗಳಲ್ಲಿ ಪದೇಪದೇ ಘಟನೆಗಳು ನಡೆದ ಬಳಿಕ ಅಧಿಕಾರಿಗಳನ್ನು ವರ್ಗಾವಣೆ ಅಥವಾ ಅಮಾನತು ಮಾಡುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಅಪರಾಧ ಸಾಬೀತಾದರೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬಹುದು ಎಂದು ಹೇಳಿದರು.

ಅಪರಾಧ ನಡೆದಿರುವುದು ಸಾಬೀತಾದರೆ, ಖಂಡಿತವಾಗಿಯೂ ಅವರನ್ನು ಸೇವೆಯಿಂದ ವಜಾಗೊಳಿಸಬಹುದು, ಕಾರಾಗೃಹದ ಕೈದಿಗಳಿಗೆ ಯಾವುದೇ ವಿಐಪಿ ಸೌಲಭ್ಯ ನೀಡಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಯಾರಿಗೂ ಈ ರೀತಿಯ ವಿಐಪಿ ಸೌಲಭ್ಯ ದೊರೆಯಲು ನಾವು ಅವಕಾಶ ನೀಡುವುದಿಲ್ಲ. ಈ ದಾಳಿಯೇ ಅದಕ್ಕೆ ಸಂದೇಶವಾಗಿದೆ. ನೀವು ನನ್ನ ಅಧಿಕಾರಿಗಳಿಗೆ ಲಂಚ ನೀಡಿ ನಿಮಗೆ ಬೇಕಾದಂತೆ ಮಾಡಿಕೊಳ್ಳಬಹುದು ಎಂದು ಭಾವಿಸಿದರೆ ತಪ್ಪು ಭಾವನೆ ಎಂದು ಎಚ್ಚರಿಸಿದರು.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದೆ ಎಂಬ ವರದಿಗಳ ಕುರಿತು ಕೇಳಿದಾಗ, ಈ ಕುರಿತು ತಕ್ಷಣವೇ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಯಾವ ಮೊಬೈಲ್ ಫೋನ್ ಪತ್ತೆಯಾಗಿದೆ, ಪೆನ್‌ಡ್ರೈವ್ ಯಾರ ಬಳಿ ಇತ್ತು, ಯಾರ ನೋಟ್‌ಬುಕ್ ಪತ್ತೆಯಾಗಿದೆ—ಇವೆಲ್ಲವನ್ನೂ ಗೌಪ್ಯವಾಗಿಡಬೇಕು. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದರು.

ನಿಷೇಧಿತ ವಸ್ತುಗಳನ್ನು ಕಾರಾಗೃಹದೊಳಗೆ ತಂದವರು ಯಾರು ಮತ್ತು ಕೈದಿಗಳಿಗೆ ಯಾರು, ಯಾವ ರೀತಿಯಲ್ಲಿ ಸಹಕರಿಸಿದ್ದಾರೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಬೇಕಿರುವುದರಿಂದ ತನಿಖೆಯನ್ನು ಅವಸರದಲ್ಲಿ ನಡೆಸಬಾರದು. ಈಗಷ್ಟೇ ಪತ್ತೆಯಾಗಿದೆ. ಅದನ್ನು ಒಳಗೆ ತಂದವರು ಯಾರು, ಅಲ್ಲಿರುವ ಕೈದಿಗಳಿಗೆ ಯಾರು ಸಹಕರಿಸುತ್ತಿದ್ದಾರೆ ಮತ್ತು ಯಾವ ರೀತಿಯಲ್ಲಿ ಸಹಕರಿಸುತ್ತಿದ್ದಾರೆ ಎಂಬುದನ್ನು ನಾವು ಪತ್ತೆಹಚ್ಚಬೇಕಿದೆ ಎಂದು ಹೇಳಿದರು.

ಕಾರಾಗೃಹದ ಡಿಜಿಟಲ್ ಮೂಲಸೌಕರ್ಯ, ಮೊಬೈಲ್ ಫೋನ್ ಜಾಮರ್‌ಗಳು ಸೇರಿದಂತೆ ಸಂಪೂರ್ಣ ತಾಂತ್ರಿಕ ಪರಿಶೀಲನೆ ನಡೆಸುವಂತೆ ತಾವು ಆದೇಶಿಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com