

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತಮಿಳುನಾಡಿಗೆ ನೀರು ಬಿಟ್ರೆ ನಾನೇ ಹೋರಾಟ ಮಾಡುತ್ತೇನೆ. ನಾನು ರೈತರ ಪರ, ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಅದು, ಇದು ಎಂದು ಮಾತನಾಡುತ್ತಾರೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಯಾವ ರೀತಿಯ ಆದೇಶ ಮಾಡಿದ್ದಾರೆ ಎಂಬುದು ಗೊತ್ತಿಲ್ಲ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಕೊಡಬಾರದು. ಸದ್ಯ ಕಬಿನಿ ಜಲಾಶಯ ತುಂಬಿರುವ ಕಾರಣ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಆದರೆ, ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಒಂದು ವೇಳೆ ಸರ್ಕಾರ ನೀರು ಬಿಟ್ಟರೆ ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಬಂದ್‌ಗೂ ಗಣಿಗ ರವಿಕುಮಾರ್ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.