

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದ್ದು, ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಮಂಗಳವಾರ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಬಿಡುವಂತೆ ನೀಡಿದ ಆದೇಶದ ವಿರುದ್ಧ ಕನ್ನಡಪರ ಸಂಘಟನೆಗಳು ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಬರದ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ನೀಡಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಾಳೆ ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರೈತ ಸಂಘಟನೆಗಳು ಬಿಟ್ಟರೆ ಬೇರೆ ಯಾವುದೇ ಸಂಘಟನೆಗಳು ಬೆಂಬಲಿಸಿಲ್ಲ.
ಆರಂಭದಲ್ಲೇ ಬಂದ್‌ಗೆ ಬೆಂಬಲ ನೀಡುವುದಾಗಿ ಹಲವು ಸಂಘಟನೆಗಳು ಭರವಸೆ ನೀಡಿದ್ದವು. ಆದರೆ ಇದೇ ಸಮಯಕ್ಕೆ ಸ್ವಲ್ಪ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ರೈತರ ಪರ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕೆಲ ಸಂಘಟನೆಗಳು ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ನಾಳಿನ ಬಂದ್ ಗೆ ಈಗಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಾದ್ಯಂತ ಜನಜೀವನ ಎಂದಿನಂತೆ ಯಥಾಸ್ಥಿತಿ ಇರುವ ಸಾಧ್ಯತೆ ಇದೆ.
ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ
ಕರ್ನಾಟಕ ಬಂದ್ ನೈತಿಕ ಬೆಂಬಲ ಮಾತ್ರ ನೀಡುತ್ತಿದ್ದೇವೆ. ಶಾಲಾ-ಕಾಲೇಜುಗಳಿಗೆ ನೀಡುವ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕರ್ನಾಟಕ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ(KAMS) ತಿಳಿಸಿದೆ. ಹೀಗಾಗಿ ಶಾಲಾ-ಕಾಲೇಜುಗಳು, ಸಾರಿಗೆ ಸೇವೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಯಥಾರೀತಿ ನಡೆಯಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
ನಾಳೆ ಏನಿರುತ್ತೆ? ಏನಿರಲ್ಲ?
ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ ಸೇವೆಗಳಾದ KSRTC, BMTC ಬಸ್‌ಗಳು, ನಮ್ಮ ಮೆಟ್ರೋ, ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಇನ್ನು ಆರೋಗ್ಯ ಸೇವೆಗಳಾದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.
ಅಗತ್ಯ ಸರಕುಗಳಾದ ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರ ವಹಿವಾಟು ನಡೆಯಲಿದೆ.
ಬಂದ್‌ಗೆ ಯಾರ ಬೆಂಬಲ?
ವಾಟಾಳ್ ನಾಗರಾಜ್ ನೇತೃತ್ವದ ‘ಕನ್ನಡ ಸಂಘಟನೆಗಳ ಒಕ್ಕೂಟ’
ಕನ್ನಡ ಸೇನೆ
ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ