ಚಾಮರಾಜನಗರ ಶೂಟೌಟ್‌ ಪ್ರಕರಣ: ಹನೂರು ಠಾಣೆ ಮುಂದೆ ನೂರಾರು ಮಂದಿಯಿಂದ ಪ್ರತಿಭಟನೆ, ತನಿಖೆಗೆ ಆಗ್ರಹ..!

ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ತನಿಖೆ ಆರಂಭವಾಗಿದೆ. ಏಳು ದಿನಗಳೊಳಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Farmers and villagers stage protest demanding justice and compensation for three men killed in an encounter by forest personnel in Hanur taluk on Sunday.
ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವುದು.
Updated on

ಮೈಸೂರು: ಕರ್ನಾಟಕದ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಪ್ರಕರಣದ ಬಳಿಕ ಹನೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೃತರ ಕುಟುಂಬಸ್ಥರಿಗೆ ರೈತರು, ದಲಿತ ಹಾಗೂ ಬುಡಕಟ್ಟು ಮುಖಂಡರು ಬೆಂಬಲ ನೀಡಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಮೂವರ ಸಾವಿನ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ತನಿಖೆ ಆರಂಭವಾಗಿದೆ. ಏಳು ದಿನಗಳೊಳಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿರುವುದಾಗಿ ದಿನೇಶ್ ಕುಮಾರ್ ಮೀನಾ ಹೇಳಿದ್ದಾರೆ. “ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುವುದು. ಮೃತರ ಮರಣೋತ್ತರ ಪರೀಕ್ಷೆ ವರದಿಗಳು ಬಂದ ಬಳಿಕ ಸಮಗ್ರ ವರದಿ ಸಿದ್ಧಪಡಿಸಲಾಗುವುದು” ಎಂದು ತಿಳಿಸಿದ್ದಾರೆ.

Farmers and villagers stage protest demanding justice and compensation for three men killed in an encounter by forest personnel in Hanur taluk on Sunday.
ಚಾಮರಾಜನಗರ ಶೂಟೌಟ್‌ ಕೇಸ್: ‘ಮೃತರು ರೈತರೇ ಹೊರತು ಬೇಟೆಗಾರರಲ್ಲ’; ಮೂವರು ತಮಿಳರ ಹತ್ಯೆಗೆ ಸಿಎಂ ವಿಜಯ್ ತೀವ್ರ ಖಂಡನೆ, ಉನ್ನತ ಮಟ್ಟದ ತನಿಖೆಗೆ ಆಗ್ರಹ..!

ಅರಣ್ಯ ಸಿಬ್ಬಂದಿ ಆರೋಪಿಗಳಲ್ಲ

ಎಫ್‌ಐಆರ್‌ ಪ್ರತಿಯ ಪ್ರಕಾರ, ಮೃತ ಆಂಥೋನಿ ಅವರ ಪತ್ನಿ ಲೂರ್ಡ್ ಮೇರಿ ನೀಡಿದ ದೂರಿನ ಆಧಾರದ ಮೇಲೆ ಹನೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಯಾವುದೇ ಅರಣ್ಯ ಸಿಬ್ಬಂದಿಯ ಹೆಸರನ್ನು ಆರೋಪಿಗಳಾಗಿ ಉಲ್ಲೇಖಿಸದಿದ್ದರೂ, ಅವರ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣದಡಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆ ‘ನಕಲಿ ಎನ್‌ಕೌಂಟರ್‌’ ಎಂದು ಆರೋಪಿಸಿರುವ ಕುಟುಂಬಸ್ಥರು ಹಾಗೂ ಪ್ರತಿಭಟನಾಕಾರರು, ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಅರಣ್ಯ ಸಿಬ್ಬಂದಿಯನ್ನು ತಮ್ಮ ಮುಂದೆ ಕರೆತರಬೇಕು ಎಂದು ಆಗ್ರಹಿಸಿದ್ದಾರೆ.

ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತಂದರೆ ಅವರ ಮೇಲೆ ದಾಳಿ ನಡೆಸುವುದಾಗಿ ಕೆಲ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಆಕ್ರೋಶಗೊಂಡ ಗ್ರಾಮಸ್ಥರಿಂದ ಪ್ರತೀಕಾರದ ಭೀತಿ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಶನಿವಾರದಿಂದ ಆರಂಭವಾದ ಪ್ರತಿಭಟನೆ ಭಾನುವಾರ ಸಂಜೆಯವರೆಗೂ ಮುಂದುವರಿದಿದ್ದು, ನೂರಾರು ಮಂದಿ ಹನೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ನ್ಯಾಯ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಮೃತರ ಕುಟುಂಬಗಳಿಗೆ ತಲಾ ರೂ. 15 ಲಕ್ಷ ಪರಿಹಾರ ಭರವಸೆ

ಈ ನಡುವೆ ಶಾಸಕ ಎಂ.ಆರ್. ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ತಾತ್ಕಾಲಿಕ ಪರಿಹಾರವಾಗಿ ಮೃತರ ಪ್ರತಿ ಕುಟುಂಬಕ್ಕೆ ರೂ.15 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಇದರಲ್ಲಿ ಸರ್ಕಾರದಿಂದ ರೂ.5 ಲಕ್ಷ ಹಾಗೂ ತಮ್ಮ ವೈಯಕ್ತಿಕ ನಿಧಿಯಿಂದ ರೂ.10 ಲಕ್ಷ ನೀಡುವುದಾಗಿ ಅವರು ತಿಳಿಸಿದರು.

ಗಲಭೆ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.

ದಕ್ಷಿಣ ವಲಯದ ಐಜಿಪಿ ಡಾ. ಬೋರಲಿಂಗಯ್ಯ ಅವರು ಶನಿವಾರದಿಂದ ಹನೂರಿನಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಭಾನುವಾರ ಹನೂರು ಪ್ರವಾಸಿ ಮಂದಿರದಲ್ಲಿ ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ, ಚಾಮರಾಜನಗರ ಎಸ್‌ಪಿ ಮುತ್ತುರಾಜ್ ಹಾಗೂ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಲದಂಡಿ ಅವರೊಂದಿಗೆ ಸಭೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದರು.

ಇದೇ ವೇಳೆ, ಮೈಸೂರಿನ ವಕೀಲ ಪುನೀತ್ ಎನ್. ಅವರು ಮೂವರ ಸಾವಿನ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ತನಿಖೆ ಬಳಿಕ ಸ್ಪಷ್ಟತೆ: ಸಿಎಂ

ಏತನ್ಮಧ್ಯೆ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಮೃತರ ಬಳಿ ಎರಡು ಕೆ.ಜಿ. ವನ್ಯಜೀವಿ ಮಾಂಸ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com