ಹನೂರು ಶೂಟೌಟ್ ಪ್ರಕರಣ: ವಿಧಾನ ಪರಿಷತ್‌ನಲ್ಲಿ ಭಾರೀ ಕೋಲಾಹಲ, ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಪಟ್ಟು..!

ಮುಂಗಾರು ಅಧಿವೇಶನದ ಮೂರನೇ ದಿನ ಕಲಾಪ ಆರಂಭವಾಗುತ್ತಿದ್ದಂತೆ, ಪ್ರತಿಪಕ್ಷ ಸದಸ್ಯರು ಮೂವರು ಶಂಕಿತ ಬೇಟೆಗಾರರ ಹತ್ಯೆಯನ್ನು ಸರ್ಕಾರ ನಡೆಸಿದ “ಅಮಾನವೀಯ ಹತ್ಯೆ” ಎಂದು ಆರೋಪಿಸಿದರು.
Council
ವಿಧಾನ ಪರಿಷತ್
Updated on

ಬೆಂಗಳೂರು: ಹನೂರು ವನ್ಯಜೀವಿ ವಲಯದಲ್ಲಿ ಮೂವರು ಶಂಕಿತ ಬೇಟೆಗಾರರು ಗುಂಡಿನ ದಾಳಿಯಲ್ಲಿ ಮೃತಪಟ್ಟ ಪ್ರಕರಣ ಸೋಮವಾರ ವಿಧಾನ ಪರಿಷತ್‌ನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಮೃತರ ಕುಟುಂಬಗಳಿಗೆ ತಲಾ ರೂ.50 ಲಕ್ಷ ಪರಿಹಾರ ನೀಡಬೇಕು ಹಾಗೂ ಗುಂಡಿನ ದಾಳಿಯ ಹಿಂದಿನ ನೈಜ ಕಾರಣಗಳನ್ನು ಪತ್ತೆಹಚ್ಚಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು.

ಮುಂಗಾರು ಅಧಿವೇಶನದ ಮೂರನೇ ದಿನ ಕಲಾಪ ಆರಂಭವಾಗುತ್ತಿದ್ದಂತೆ, ಪ್ರತಿಪಕ್ಷ ಸದಸ್ಯರು ಮೂವರು ಶಂಕಿತ ಬೇಟೆಗಾರರ ಹತ್ಯೆಯನ್ನು ಸರ್ಕಾರ ನಡೆಸಿದ “ಅಮಾನವೀಯ ಹತ್ಯೆ” ಎಂದು ಆರೋಪಿಸಿದರು.

ಈ ವಿಚಾರವನ್ನು ತಕ್ಷಣವೇ ಚರ್ಚೆಗೆ ತೆಗೆದುಕೊಳ್ಳಬೇಕು ಮತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸದನದಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸದನದಲ್ಲಿ ಘೋಷಣೆಗಳು ಮುಂದುವರಿದ ಹಿನ್ನೆಲೆಯಲ್ಲಿ ಸಭಾಪತಿ ಸಲಿಂ ಅಹ್ಮದ್ ಅವರು, ಕಲಾಪವನ್ನು ಕೆಲಕಾಲ ಮುಂದೂಡಿದರು.

ಮಧ್ಯಾಹ್ನ ಕಲಾಪ ಪುನರಾರಂಭವಾದ ಬಳಿಕ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಗುಂಡಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಆದರೆ, ಮೃತರ ಕುಟುಂಬಸ್ಥರು, ಕಾಣೆಯಾಗಿದ್ದ ಜಾನುವಾರುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ತೆರಳಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, “ಜಾನುವಾರುಗಳನ್ನು ಹುಡುಕಲು ಹೋಗಿದ್ದರೆ, ಅವರ ಬಳಿ ನಾಡ ಬಂದೂಕು, ಗುಂಡುಗಳು, ಸಿಡಿಮದ್ದು ಹಾಗೂ ಅಡುಗೆ ಸಾಮಗ್ರಿಗಳು ಏಕೆ ಇದ್ದವು?” ಎಂದು ಪ್ರಶ್ನಿಸಿದರು.

Council
ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

ಕಾಂಗ್ರೆಸ್‌ ಎಂಎಲ್‌ಸಿ ಶಿವಕುಮಾರ್ ಮಾತನಾಡಿ, ಕಳೆದ ಎರಡು ದಶಕಗಳಿಂದ ಅರಣ್ಯ ಇಲಾಖೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಬೇಟೆ ತಡೆ ಶಿಬಿರಗಳನ್ನು ಬಲಪಡಿಸಿಲ್ಲ ಹಾಗೂ ಅಗತ್ಯ ಪ್ರಮಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ ಎಂದು ದೂರಿದರು.

ಎಂಎಲ್‌ಸಿ ಡಿ.ಎಸ್. ಅರುಣ್ ಅವರು ಮಾತನಾಡಿ, ಅರಣ್ಯ ಸಚಿವರು ನೀಡಿದ ಏಳು ಪುಟಗಳ ಉತ್ತರವನ್ನು ಪ್ರಶ್ನಿಸಿದರು.

ಗುಂಡಿನ ದಾಳಿ ನಡೆಸುವಂತೆ ಯಾವ ಅರಣ್ಯಾಧಿಕಾರಿ ಆದೇಶಿಸಿದ್ದರು ಎಂಬುದನ್ನು ಉತ್ತರದಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದರು. ಅರಣ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗದಿದ್ದರೆ, ತಂತ್ರಜ್ಞಾನ ಬಳಸುವುದಕ್ಕೆ ಸರ್ಕಾರಕ್ಕೆ ಏನು ಅಡ್ಡಿ ಎಂದು ಪ್ರಶ್ನಿಸಿದರು.

ಟ್ರಾಫಿಕ್ ಪೊಲೀಸರು ಬಾಡಿಕ್ಯಾಮ್‌ಗಳನ್ನು ಬಳಸುತ್ತಿರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಗೆ ಬಾಡಿಕ್ಯಾಮ್‌, ಜಿಯೋ-ಫೆನ್ಸಿಂಗ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಎಂಎಲ್‌ಸಿ ರವಿ ಕುಮಾರ್ ಅವರು ಮಾತನಾಡಿ, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸ್ಥಳೀಯ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎನ್ನಲಾದ ಶಂಕಿತ ಬೇಟೆಗಾರ ಮಹಿಮದಾಸ್‌ ಪ್ರಕರಣವನ್ನೂ ಪ್ರಸ್ತಾಪಿಸಿದರು.

ಆತ ಪೊಲೀಸರಿಗೆ ಪತ್ತೆಯಾಗದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರೊಂದಿಗೆ ಮಾತನಾಡಿದ್ದಾನೆ ಎಂದು ಆರೋಪಿಸಿದರು.

“ಅವನು ನಿಜವಾಗಿಯೂ ಪರಾರಿಯಾಗಿದ್ದಾನೆಯೇ ಅಥವಾ ಆತನನ್ನು ಪರಾರಿಯಾಗಲು ಬಿಡಲಾಗಿದೆಯೇ?” ಎಂದು ರವಿ ಕುಮಾರ್ ಪ್ರಶ್ನಿಸಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸರ್ಕಾರ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವುದು ಅರಣ್ಯಾಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡುವಂತಾಗುತ್ತದೆ. ಹೀಗಾಗಿ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯನ್ನೇ ನಡೆಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸಭಾಪತಿ ಸಲಿಂ ಅಹ್ಮದ್ ಅವರು, ವಿಧಾನ ಪರಿಷತ್‌ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com