

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿಯಿಂದ 1.08 ಕೋಟಿಗೂ ಹೆಚ್ಚು ಮತದಾರರ ಹೆಸರುಗಳು ಅಳಿಕೆಯಾಗಲಿವೆ. ಮುಂದಿನ ಹಂತದಲ್ಲಿ ಸಂಬಂಧಿತ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿ (ERO) ಅವರಿಗೆ ಸಲ್ಲಿಸದಿದ್ದರೆ, ಇನ್ನೂ 25 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಆಗಸ್ಟ್ 17ರ ಸಂಜೆ 7 ಗಂಟೆಯ ವೇಳೆಗೆ, ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆದ ಮನೆ ಮನೆಗೆ ತೆರಳಿ ಮತದಾರರ ಪರಿಶೀಲನಾ ಪ್ರಕ್ರಿಯೆಯ ಬಳಿಕ, ಒಟ್ಟು 5.54 ಕೋಟಿ ಮತದಾರರ ಪೈಕಿ 1,08,31,945 ಮಂದಿ (19.54%) ಮತದಾರರನ್ನು ASDDO (Absent, Shifted, Dead, Duplicate and Others-ಗೈರುಹಾಜರು, ಸ್ಥಳಾಂತರಗೊಂಡವರು, ಮೃತರು, ನಕಲಿ/ ಎರಡು ಕಡೆ ನೋಂದಣಿ ಹೊಂದಿರುವವರು ಮತ್ತು ಇತರರು) ವರ್ಗದಲ್ಲಿ ದಾಖಲಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,54,32,314 ಮತದಾರರು ಇದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 25,14,247 ಮಂದಿ (ಒಟ್ಟು ಮತದಾರರ ಶೇ. 4.54) “ನೋ-ಮ್ಯಾಪಿಂಗ್” ವರ್ಗದಲ್ಲಿದ್ದಾರೆ.
ಮನೆ ಮನೆಗೆ ತೆರಳಿ ಪರಿಶೀಲಿಸುವ ಕಾರ್ಯ ಆಗಸ್ಟ್ 17ರಂದು ಪೂರ್ಣಗೊಂಡಿದ್ದು, ಅಂತಿಮ ASDDO ಪಟ್ಟಿಯನ್ನು ರಾತ್ರಿ 11.59ರವರೆಗೆ ನವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. 2026ರ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ASDDO ಪಟ್ಟಿಯಲ್ಲಿ ಇರುವವರು ಹಾಗೂ ತಮ್ಮ ಎನ್ಯೂಮರೇಷನ್ ಫಾರ್ಮ್‌ಗಳಿಗೆ ಸಹಿ ಮಾಡಿ ಸಲ್ಲಿಸದವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ವಿ ಅನ್ಬುಕುಮಾರ್ ತಿಳಿಸಿದ್ದಾರೆ.
ಆದರೆ “ನೋ-ಮ್ಯಾಪಿಂಗ್” ವಿಭಾಗದಲ್ಲಿ ಇರುವವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಲಾಗುತ್ತದೆ. ಅವರಿಗೆ ನೊಟೀಸ್ ಜಾರಿ ಮಾಡಿ, ಪರಿಶೀಲನೆಗಾಗಿ ಪಟ್ಟಿ ಮಾಡಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ERO ಅವರಿಗೆ ಸಲ್ಲಿಸುವಂತೆ ಸೂಚಿಸಲಾಗುವುದು.
15,28,985 (2.76%) ಮಂದಿ “ಪತ್ತೆಯಾಗದವರು” ಅಥವಾ “ಗೈರು” ವಿಭಾಗದಲ್ಲಿದ್ದಾರೆ.
65,61,607 (11.84%) ಮಂದಿ “ಶಾಶ್ವತವಾಗಿ ಸ್ಥಳಾಂತರಗೊಂಡವರು”.
16,38,839 (2.96%) ಮಂದಿ “ಮೃತರು”.
7,07,792 (1.28%) ಮಂದಿ “ನಕಲಿ/ಈಗಾಗಲೇ ನೋಂದಾಯಿತರಾದವರು”.
3,94,722 (0.71%) ಮಂದಿ “ಇತರೆ” ವಿಭಾಗದಲ್ಲಿದ್ದು, ಫಾರ್ಮ್‌ಗಳಿಗೆ ಸಹಿ ಮಾಡಲು ಇಚ್ಛಿಸದವರು.
ರಾಜ್ಯದ ಒಟ್ಟು ASDDO ಮತದಾರರಲ್ಲಿ 43.53 ಶೇಕಡಾ ಮಂದಿ ಬೆಂಗಳೂರಿನ ನಾಲ್ಕು ಜಿಲ್ಲೆಗಳಲ್ಲಿದ್ದಾರೆ.
ಅವುಗಳೆಂದರೆ
ಬೆಂಗಳೂರು ನಗರ: 17,26,634 (42.94%)
ಬಿಬಿಎಂಪಿ ಉತ್ತರ: 10,58,104 (45.36%)
ಬಿಬಿಎಂಪಿ ದಕ್ಷಿಣ: 10,64,044 (49.61%) — ರಾಜ್ಯದಲ್ಲೇ ಅತ್ಯಧಿಕ
ಬಿಬಿಎಂಪಿ ಕೇಂದ್ರ: 8,66,406 (45.84%)
ಅತ್ಯಂತ ಕಡಿಮೆ ಪ್ರಮಾಣದ ಅಳಿಕೆ ಉಡುಪಿ ಜಿಲ್ಲೆಯಲ್ಲಿ ದಾಖಲಾಗಿದ್ದು, 63,364 ಮತದಾರರು (5.96%) ASDDO ಪಟ್ಟಿಯಲ್ಲಿದ್ದಾರೆ. ನಂತರ ಹಾವೇರಿ ಜಿಲ್ಲೆಯಲ್ಲಿ 1,15,068 (8.62%) ಮಂದಿ ಇದ್ದಾರೆ.
ಎಸ್‌ಐಆರ್‌ನ ಮುಂದಿನ ಹಂತವಾದ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ನಡೆಯಲಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರು, ಮತ್ತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಫಾರ್ಮ್-6 ಭರ್ತಿ ಮಾಡಿ ಸಲ್ಲಿಸಬಹುದು.
ಮತದಾರರ ಮಾಹಿತಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕಾದವರು ಫಾರ್ಮ್-8 ಸಲ್ಲಿಸಬಹುದು ಎಂದು ಚುನಾವಣಾ ಕಚೇರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 17ರವರೆಗೆ 4,28,679 ಮಂದಿ ಹೆಸರು ಸೇರ್ಪಡೆಗಾಗಿ ಫಾರ್ಮ್-6 ಸಲ್ಲಿಸಿದ್ದರೆ, 8,68,405 ಮಂದಿ ತಿದ್ದುಪಡಿಗಾಗಿ ಫಾರ್ಮ್-8 ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಂಕಿಅಂಶಗಳು ತಿಳಿಸಿವೆ.
ರಾಜ್ಯದಲ್ಲಿ ಕೊನೆಯ ಬಾರಿಗೆ 2002ರಲ್ಲಿ SIR ನಡೆಸಲಾಗಿತ್ತು. ಆಗ ಕರ್ನಾಟಕದಲ್ಲಿ 3.4 ಕೋಟಿ ಮತದಾರರಿದ್ದರು. 2002ರಲ್ಲಿ ಎಷ್ಟು ಹೆಸರುಗಳನ್ನು ಅಳಿಸಲಾಗಿತ್ತು ಎಂಬುದರ ನಿಖರ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆಗಳಾಗಿದ್ದವು, ದತ್ತಾಂಶ ಡಿಜಿಟಲೀಕರಣ ಪ್ರಾರಂಭವಾಗಿತ್ತು ಮತ್ತು EPIC ಕಾರ್ಡ್‌ಗಳ ವಿತರಣೆ ಆರಂಭಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಎಸ್‌ಐಆರ್ ಆರಂಭಕ್ಕೂ ಮುನ್ನ ನಡೆಸಿದ ಮ್ಯಾಪಿಂಗ್ ಪ್ರಕ್ರಿಯೆ ಕಚೇರಿ ಆಧಾರಿತ ಪರಿಶೀಲನೆ (table-top exercise) ಆಗಿತ್ತೇ ಹೊರತು, ವಿಳಾಸ ಪರಿಶೀಲನೆ ಪ್ರಕ್ರಿಯೆಯಾಗಿರಲಿಲ್ಲ. ಮತದಾರರ ಹೆಸರುಗಳು 2002ರ ಪಟ್ಟಿಯಲ್ಲಿ ಹಾಗೂ ನಂತರದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಪಟ್ಟಿಗಳಲ್ಲಿ ಇದ್ದವೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗಿತ್ತು.
ಕೊನೆಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನ್ನು 2025ರ ಜನವರಿ 1ರಂದು ನಡೆಸಲಾಗಿತ್ತು. ಅದರಲ್ಲಿ ಮತದಾರರ ಮನೆ ವಿಳಾಸವನ್ನು ಆಧಾರವಾಗಿಸಿಕೊಳ್ಳಲಾಗಿತ್ತು. ಎಸ್ ಐಆರ್ ಇದ್ದುದರಿಂದ ಜನವರಿ 1ರಂದು SSR ನಡೆಸಲಾಗಲಿಲ್ಲ.
ಭಾರತದ ಚುನಾವಣಾ ಆಯೋಗದ ಅಧಿಕಾರಿಯೊಬ್ಬರ ಪ್ರಕಾರ, SIR ಅಡಿಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರಾಸರಿ ಶೇ. 19ರಿಂದ 20ರಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿದೆ.
ಕರಡು ಮತದಾರರ ಪಟ್ಟಿಯ ಅಂಕಿಅಂಶಗಳು, ಅಳಿಕೆ ಪ್ರಮಾಣ ಹಾಗೂ ಇತರ ಪ್ರವೃತ್ತಿಗಳನ್ನು ಇನ್ನಷ್ಟೇ ವಿಶ್ಲೇಷಿಸಬೇಕಿದೆ. ಈ ವಿಶ್ಲೇಷಣೆಯಿಂದ ಜನರ ವಲಸೆ ಹಾಗೂ ನಕಲಿ ಮತದಾರರ ಮಾದರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.
ದೇಶಾದ್ಯಂತ SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಮಾಹಿತಿಯು ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಸಹ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.