

ಮೈಸೂರು/ಬೆಂಗಳೂರು: ಕಾವೇರಿ ವನ್ಯಜೀವಿ ಧಾಮದಲ್ಲಿ ಆಗಸ್ಟ್ 15 ರಂದು ನಡೆದ ಶೂಟೌಟ್ ಪ್ರಕರಣ ಈಗ ಎರಡು ರಾಜ್ಯಗಳ ನಡುವಿನ ಸಂಘರ್ಷ ಹಾಗೂ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.
ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದ್ದರು. ಆದರೆ, ಮೃತರನ್ನು ತಮ್ಮ ಅಮಾಯಕರು, ಜಾನುವಾರು ರಕ್ಷಕರು ಎಂದು ವಾದಿಸುತ್ತಿರುವ ಸ್ಥಳೀಯ ಗ್ರಾಮಸ್ಥರು, ಅರಣ್ಯ ಇಲಾಖೆಯ ವಿರುದ್ಧ ಪ್ರತಿಕಾರಕ್ಕೆ ಇಳಿದಿದ್ದಾರೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅಕ್ರಮ ಬೇಟೆ ತಡೆಗಾಗಿ ನಿರ್ಮಿಸಲಾಗಿದ್ದ ಹಲವು ಶಿಬಿರಗಳ ಮೇಲೆ ದುಷ್ಕರ್ಮಿಗಳು ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಡೈನಮೈಟ್, ಜಿಲೆಟಿನ್ ಕಡ್ಡಿ ಬಳಸಿ ಶಿಬಿರಗಳ ಸ್ಫೋಟ
ಕೊತ್ತನೂರು ವಲಯದಲ್ಲಿರುವ ಮಿಂಚಿನರೆಹಳ್ಳ ಅಕ್ರಮ ಬೇಟೆ ತಡೆ ಶಿಬಿರವನ್ನು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗೆ ಇರಿಸಲಾಗಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
ಕೊತ್ತನೂರು ವಲಯದ ಮಿಂಚಿನಹಳ್ಳಿ, ಭೀಮೇಶ್ವರಿ, ಒಳ್ಳೆಮರದ ಹಟ್ಟಿ, ಬೂದಿಕೆರೆ, ಬಂಡಹಳ್ಳಿ ಮತ್ತು ಕಾಲಿದೊಡ್ಡಿ ಸೇರಿದಂತೆ ಹಲವು ಅಕ್ರಮ ಬೇಟೆ ತಡೆ ಶಿಬಿರಗಳನ್ನೂ ಆಗಸ್ಟ್ 18-19ರ ಮಧ್ಯರಾತ್ರಿ ಗುರಿಯಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗ್ರಾಮಗಳಾದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಎಂಬ ಮೂವರು ವ್ಯಕ್ತಿಗಳು ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದರು.
ಅಕ್ರಮ ಬೇಟೆಯ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ಶಂಕಿತ ಬೇಟೆಗಾರರ ಗುಂಪಿನಿಂದ ಗುಂಡಿನ ದಾಳಿ ನಡೆದಿದೆ. ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂಬುದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಈ ಗುಂಡಿನ ದಾಳಿ ಹಾಗೂ ಮೂವರ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ತನಿಖೆ ವರದಿ ಬಂದ ಬಳಿಕ ಮಾತನಾಡುತ್ತೇನೆ: ಸಿಎಂ
ಈ ನಡುವೆ ಅಕ್ರಮ ಬೇಟೆ ತಡೆ ಶಿಬಿರಗಳ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಗಸ್ಟ್ 15ರ ಗುಂಡಿನ ದಾಳಿ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಈ ಬಗ್ಗೆ ಯಾವುದೇ ಅಂತಿಮ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಅರಣ್ಯ ಅಧಿಕಾರಿಗಳು ಪ್ರಕರಣದ ಕುರಿತು ವಿವಿಧ ಮಾಹಿತಿಗಳನ್ನು ನೀಡುತ್ತಿದ್ದಾರೆ. ಆದರೆ, ಸರ್ಕಾರವು ಈ ವಿಷಯವನ್ನು ಆಳವಾಗಿ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅರಣ್ಯ ಸಚಿವರೂ ಪ್ರಕರಣದ ಕುರಿತು ವಿವರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲೂ ಪ್ರತಿಧ್ವನಿಸಿದ ಪ್ರಕರಣ
ಈ ನಡುವೆ ಮೂವರು ಮೃತಪಟ್ಟ ಗುಂಡಿನ ದಾಳಿ ಪ್ರಕರಣದ ಪ್ರತಿಧ್ವನಿ ನೆರೆಯ ತಮಿಳುನಾಡಿನಲ್ಲೂ ಕೇಳಿಬಂದಿದೆ. ಮೃತಪಟ್ಟವರು ತಮಿಳುನಾಡಿಗೆ ಸೇರಿದವರು ಎಂದು ಅಲ್ಲಿನ ಕೆಲವು ರಾಜಕೀಯ ಪಕ್ಷಗಳು ಹೇಳಿದ್ದು, ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿವೆ.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಈ ಗಂಭೀರ ಘಟನೆಯ ಕುರಿತು ಉನ್ನತ ಮಟ್ಟದ ಸಮಿತಿಯಿಂದ ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.
ಈ ವಿಷಯ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ಅರಣ್ಯ ಇಲಾಖೆ ನಡೆಸಿದ ಗುಂಡಿನ ದಾಳಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಕಾವೇರಿ ವನ್ಯಜೀವಿಧಾಮದಲ್ಲಿನ ಅಕ್ರಮ ಬೇಟೆ ತಡೆ ಶಿಬಿರಗಳ ಮೇಲೆಯೇ ಸ್ಫೋಟಕ ದಾಳಿ ನಡೆದಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ದಾಳಿಯ ಹಿಂದಿರುವವರು ಯಾರು ಮತ್ತು ಉದ್ದೇಶವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.