

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಬೆಂಗಳೂರು ಬೆಳೆದಂತೆ, ರಾಜಧಾನಿಯ ಆಕಾಶದಲ್ಲಿ ದಿನದಿಂದ ದಿನಕ್ಕೆ ವಿಮಾನಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅದರಲ್ಲೂ, ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಗರಿಷ್ಠ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ನಗರಕ್ಕೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಆದರೆ, ಈ ಎರಡನೇ ವಿಮಾನ ನಿಲ್ದಾಣಕ್ಕೇನೆ ಕಂಟಕ ಎದುರಾಗಿದೆ! ಅದರಲ್ಲೂ, ತುಮಕೂರು ಹಾಗೂ ಕನಕಪುರಕ್ಕೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನುತಿರುವ ನಡುವೆಯೇ, ಸರ್ಕಾರದಿಂದ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ. ಆ ಕುರಿತ ವರದಿ ಇಲ್ಲಿದೆ:
ಯಾಕೆ ಎರಡನೇ ವಿಮಾನ ನಿಲ್ದಾಣ ಬೇಕು?
ಪ್ರಸ್ತುತ ಕೆಂಪೇಗೌಡ ಏರ್ ಪೋರ್ಟ್ ವರ್ಷಕ್ಕೆ 4 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸುತ್ತಿದೆ. 2030 ರ ವೇಳೆಗೆ ಈ ಸಂಖ್ಯೆ 8 ಕೋಟಿ ದಾಟುವ ಅಂದಾಜಿದೆ. ಒಂದೇ ಏರ್ ಪೋರ್ಟ್ ನಿಂದ ಇಷ್ಟು ದಟ್ಟಣೆಯನ್ನು ನಿಭಾಯಿಸುವುದು ಕಷ್ಟ. ವಿಮಾನ ತಡ, ಪಾರ್ಕಿಂಗ್ ಸಮಸ್ಯೆ ಮತ್ತು ಸಂಪರ್ಕದ ಒತ್ತಡ ಕಡಿಮೆ ಮಾಡಲು ಎರಡನೇ ಏರ್ ಪೋರ್ಟ್ ಅಗತ್ಯ ಎಂದು ತಜ್ಞರು ಹೇಳುತ್ತಿದ್ದಾರೆ.
ತುಮಕೂರಿಗೆ ಚಾನ್ಸ್ ಮಿಸ್?
ವಿಧಾನಸಭೆಯ ಅಧಿವೇಶನದಲ್ಲಿ ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕೇಳಿದ ಪ್ರಶ್ನೆಗೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣವಾಗಲಿ ಅಥವಾ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಲಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ, ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲದೇ ಇರುವುದರಿಂದ, ಮುಂಬರುವ ಬಜೆಟ್‌ಗಳಲ್ಲಿ ಈ ಯೋಜನೆಗೆ ಹಣ ಮೀಸಲಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜಿಲ್ಲೆಯ ಜನರ ನಿರೀಕ್ಷೆಗೆ ತಣ್ಣೀರೆರಚಿದ್ದಾರೆ.
ಅದರಲ್ಲೂ, ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಬಿಜೆಪಿಯ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದರು. ಇಲ್ಲಿ ವಿಮಾನ ನಿಲ್ದಾಣವಾದರೆ 18 ರಿಂದ 20 ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತದೆ ಎಂಬುದು ಅವರ ವಾದವಾಗಿತ್ತು. ಆದರೆ, ಸದ್ಯ ಸರ್ಕಾರದ ಅಧಿಕೃತ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯ ಯಾವುದೇ ಸ್ಥಳ ಪರಿಗಣನೆಯಲ್ಲಿಲ್ಲ.
ಮಿಸ್ ಆಗೋಕೆ ಕಾರಣವೇನು?
ಕೇಂದ್ರ ಸರ್ಕಾರದ 2008ರ 'ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿ'ಯ ಪ್ರಕಾರ, ಚಾಲ್ತಿಯಲ್ಲಿರುವ ನಾಗರಿಕ ವಿಮಾನ ನಿಲ್ದಾಣದ (ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ) 150 ಕಿಲೋಮೀಟರ್ ವೈಮಾನಿಕ ದೂರದೊಳಗೆ ಮತ್ತೊಂದು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಸಾಮಾನ್ಯವಾಗಿ ಅನುಮತಿ ಸಿಗುವುದಿಲ್ಲ. ಹೀಗಾಗಿ ತುಮಕೂರಿನಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಸ್ಥಾಪನೆ ಕಷ್ಟಸಾಧ್ಯ.
ಹಾಗಾದರೆ, ಎಲ್ಲಿ ಬರಬಹುದು ಹೊಸ ಏರ್ ಪೋರ್ಟ್?
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ ಸರ್ಕಾರ: ರಾಮನಗರ ಜಿಲ್ಲೆಯ ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಮತ್ತು ಚೂಡಹಳ್ಳಿ, ನೆಲಮಂಗಲ ಸಮೀಪದ ಗೂಡಮರನಹಳ್ಳಿ ಇದರೊಂದಿಗೆ ಬೆಂಗಳೂರು ದಕ್ಷಿಣದ ಹಾರೋಹಳ್ಳಿ ಪ್ರದೇಶದಲ್ಲೂ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ.