ದೊಡ್ಡಬಳ್ಳಾಪುರ ಮಾಜಿ ಸಹಾಯಕ ಆಯುಕ್ತೆಯಿಂದ ಅಕ್ರಮ: ದಾಖಲೆ ತಿರುಚಿ 62 ಎಕರೆ ಜಮೀನು ವರ್ಗಾವಣೆ

ಅಕ್ರಮಗಳ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಸಹಾಯಕ ಆಯುಕ್ತೆ (Assistant Comissioner) ದುರ್ಗಾಶ್ರೀ ಎನ್. ಮೂರು ವಿವಿಧಮೂರು ಗ್ರಾಮಗಳಲ್ಲಿ ಒಟ್ಟು 62 ಎಕರೆ 20 ಗುಂಟೆ ಖಾಸಗಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತಿರುಚಿ, ಆ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಲು ಅನುಕೂಲ ಮಾಡಿಕೊಟ್ಟಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಅಕ್ರಮಗಳ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ಹೈಕೋರ್ಟ್, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಹಾಗೂ ಕಂದಾಯ ಮೇಲ್ಮನವಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆಯನ್ನು ವಂಚನೆಯಿಂದ ಉಲ್ಲೇಖಿಸಿ ನಕಲಿ ಆದೇಶಗಳನ್ನು ಸೃಷ್ಟಿಸಿದ ಆರೋಪ ದುರ್ಗಾಶ್ರೀ ಅವರ ಮೇಲಿದೆ. ವಾಸ್ತವದಲ್ಲಿ ಈ ಪ್ರಕರಣಗಳು ಸಂಬಂಧಿತ ಜಮೀನಿನ ನೈಜ ಸರ್ವೆ ನಂಬರ್‌ಗಳಿಗೆ ಯಾವುದೇ ಸಂಬಂಧ ಹೊಂದಿರಲಿಲ್ಲ. ಡಿಜಿಟಲೀಕೃತ ಸಾರ್ವಜನಿಕ ದಾಖಲೆಗಳನ್ನು ತಿರುಚಿ ಹಾಗೂ ನಕಲು ಮಾಡಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಲಾಗಿದೆ.

ವರ್ಗಾಯಿಸಲಾದ ಜಮೀನಿನ ಸಬ್‌ರಿಜಿಸ್ಟ್ರಾರ್ ಮೌಲ್ಯ 103.68 ಕೋಟಿ ರೂಪಾಯಿ ಇದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ತನಿಖಾ ವರದಿಯನ್ನು ಉಲ್ಲೇಖಿಸಿದ ಉಪಲೋಕಾಯುಕ್ತರು, ತಮ್ಮ ಕಚೇರಿಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ದುರ್ಗಾಶ್ರೀ ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಲು ಪ್ರಯತ್ನಿಸಿರುವುದು ಕಂಡುಬಂದಿದೆ ಎಂದು ಹೇಳಿದರು. ಸಾರ್ವಜನಿಕ ದಾಖಲೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಇದೆ ಎಂಬ ಜನರ ನಂಬಿಕೆಗೆ ಧಕ್ಕೆ ತರುವ ಮೂಲಕ ಅವರು ಸಾರ್ವಜನಿಕರಿಗೆ ವಂಚನೆ ಎಸಗಿದ್ದಾರೆ ಎಂದು ಉಪಲೋಕಾಯುಕ್ತರು ಹೇಳಿದರು.

ಖಾತೆ ಮ್ಯೂಟೇಶನ್‌ಗಾಗಿ ನಕಲಿ ಆದೇಶಗಳನ್ನು ಅಪ್‌ಲೋಡ್ ಮಾಡಲು ಎಸಿ ತಮ್ಮ ಡಿಜಿಟಲ್ ಸಹಿಯನ್ನು ಬಳಸಿದ್ದರು ಎಂದು ನ್ಯಾಯಮೂರ್ತಿ ವೀರಪ್ಪ ತಿಳಿಸಿದ್ದಾರೆ. ತಮ್ಮ ವರ್ಗಾವಣೆಯಾದ ದಿನವೇ ತಮ್ಮ ಹೆಸರಿನಲ್ಲಿ ನಕಲಿ ಆದೇಶಗಳನ್ನು ಸಿದ್ಧಪಡಿಸಲಾಗಿದೆ ಎಂದು ದುರ್ಗಾಶ್ರೀ ದೂರು ದಾಖಲಿಸಿದ್ದರು. ಆದರೆ, ತಮ್ಮ ಅಧಿಕೃತ ಲಾಗಿನ್ ಬಳಸಿ ಭೂಮಿ ಸಾಫ್ಟ್‌ವೇರ್‌ನಲ್ಲಿ ನಕಲಿ ಆದೇಶಗಳನ್ನು ಅಪ್‌ಲೋಡ್ ಮಾಡಿರುವ ಕುರಿತು ಅವರು ಯಾವುದೇ ಮಾಹಿತಿ ನೀಡಲಿಲ್ಲ ಎಂದು ಹೇಳಿದ್ದಾರೆ.

Representational image
ಭೂಸ್ವಾಧೀನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ; ₹18 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ, 2.53 ಕೋಟಿ ನಗದು, 100 ಎಕರೆ ಕೃಷಿ ಜಮೀನು ಪತ್ತೆ!

ದುರ್ಗಾಶ್ರೀ ಅವರ ಕ್ರಮಗಳು ರಾಜ್ಯ ಸರ್ಕಾರ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶವನ್ನೇ ವಿಫಲಗೊಳಿಸಿವೆ ಎಂದು ಉಪಲೋಕಾಯುಕ್ತರು ಹೇಳಿದ್ದಾರೆ.

ಎಸಿ ಮತ್ತು ಅವರ ಕಚೇರಿಯ ಇತರ ಅಧಿಕಾರಿಗಳ ನಡೆ ಆಘಾತ ಉಂಟುಮಾಡುವಂತಿದೆ. ಹೀಗಾಗಿ, ಸರ್ಕಾರಿ ಜಮೀನನ್ನು ರಕ್ಷಿಸಲು ಈ ಪ್ರಾಧಿಕಾರ ಹಾಗೂ ಕಾನೂನು ಜಾರಿ ಸಂಸ್ಥೆಗಳು ತುರ್ತು ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಇಲ್ಲದಿದ್ದರೆ, ಡಿಜಿಟಲೀಕೃತ ಸಾರ್ವಜನಿಕ ದಾಖಲೆಗಳ ನಿರ್ವಹಣೆಯ ಪಾರದರ್ಶಕತೆಯ ಬಗ್ಗೆ ಜನಸಾಮಾನ್ಯರು ಅನುಮಾನಪಡುವಂತಾಗಿ ಇಡೀ ಆಡಳಿತ ವ್ಯವಸ್ಥೆಯೇ ಕುಸಿಯಬಹುದು ಎಂದು ನ್ಯಾಯಮೂರ್ತಿ ವೀರಪ್ಪ ಅಭಿಪ್ರಾಯಪಟ್ಟಿದ್ದಾರೆ.

ದುರ್ಗಾಶ್ರೀ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಹೇಳಿದ ಅವರು, ಆದೇಶದಲ್ಲಿ ಉಲ್ಲೇಖಿಸಿರುವ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸೆಪ್ಟೆಂಬರ್ 22ರಂದು ಖುದ್ದಾಗಿ ಹಾಜರಾಗುವಂತೆ ಅವರಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗೂ ಆದೇಶದ ಪ್ರತಿ ರವಾನೆ

ನಾವು ಸ್ವಾತಂತ್ರ್ಯದ 80ನೇ ವರ್ಷಾಚರಣೆಯನ್ನು ಆಚರಿಸುತ್ತಿರುವಾಗಲೂ, ದುರದೃಷ್ಟವಶಾತ್ ತಹಶೀಲ್ದಾರ್, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳ ದುರಾಸೆ ಹಾಗೂ ವೈಯಕ್ತಿಕ ಲಾಭದಾಸೆಯಿಂದಾಗಿ ಭ್ರಷ್ಟಾಚಾರವು ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖ ಅಡ್ಡಿಯಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಹೇಳಿದರು.

ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶದ ಪ್ರತಿಯನ್ನು ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳುಹಿಸುವಂತೆ ಅವರು ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com