

ಮಡಿಕೇರಿ: ಕೊಡಗಿನಲ್ಲಿ ಮತ್ತೊಂದು ಪುಂಡಾನೆ ಅರಣ್ಯ ಇಲಾಖೆ ಬಲೆಗೆ ಬಿದ್ದಿದೆ. ಅಮ್ಮತ್ತಿ ವ್ಯಾಪ್ತಿಯ ಕಣ್ಣಂಗಾಲ–ಯದುವೂರು ಗ್ರಾಮಗಳ ಸುತ್ತಮುತ್ತ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 38 ವರ್ಷದ ಗಂಡು ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
120ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಐದು ಸಾಕಾನೆಗಳ ನೆರವಿನೊಂದಿಗೆ ಸೆರೆ ಕಾರ್ಯಾಚರಣೆ ನಡೆಸಲಾಯಿತು.
ಶಾರ್ಪ್‌ಶೂಟರ್ ರಂಜನ್ ಅವರು ಕಾಡಾನೆಗೆ ಅರಿವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಯಿತು.
ಸೆರೆಹಿಡಿದ ಕಾಡಾನೆಯನ್ನು ಕುಶಾಲನಗರದ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಅಮ್ಮತ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದ್ದು, ಈ ತಿಂಗಳು ನಿರಂತರವಾಗಿ ಮಾನವ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಾನವ ವಸತಿ ಪ್ರದೇಶಗಳಿಗೆ ಪದೇಪದೆ ನುಗ್ಗುತ್ತಿದ್ದ ಮೂರು ಗಂಡು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದರಂತೆ ಆಗಸ್ಟ್ 20 ರಂದು ಯಡೂರು ಗ್ರಾಮದಲ್ಲಿ ಎಸ್ಟೇಟ್ ಬಳಿ ಆನೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೊಂದು ಆನೆಯನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.