‘ಪನೀರ್’ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ: ರಾಜ್ಯದಲ್ಲಿ ಒಂದು ವರ್ಷ ನಿಷೇಧ..!

‘ಪನೀರ್’ ಹೆಸರಿನಲ್ಲಿ ಮಾರಾಟವಾಗುವ ಅನಲಾಗ್/ನಾನ್-ಡೈರಿ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಮತ್ತು ಚಿಲ್ಲರೆ ಮಾರಾಟ, ಮಾರಾಟಕ್ಕಾಗಿ ಪ್ರದರ್ಶನ ಹಾಗೂ ಪೂರೈಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್ ಪನೀರ್ (Analogue Paneer) ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟಕ್ಕೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ.

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಆಗಸ್ಟ್ 17ರಂದು ಈ ಕುರಿತು ಸರ್ಕಾರಿ ಅಧಿಸೂಚನೆ ಹೊರಡಿಸಿದೆ.

‘ಪನೀರ್’ ಹೆಸರಿನಲ್ಲಿ ಮಾರಾಟವಾಗುವ ಅನಲಾಗ್/ನಾನ್-ಡೈರಿ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಮತ್ತು ಚಿಲ್ಲರೆ ಮಾರಾಟ, ಮಾರಾಟಕ್ಕಾಗಿ ಪ್ರದರ್ಶನ ಹಾಗೂ ಪೂರೈಕೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ ಎಂದು ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಹಾಲಿನ ಕೊಬ್ಬು ಅಥವಾ ಹಾಲಿನ ಘನವಸ್ತುಗಳ ಬದಲಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಹಾಲೇತರ ಪದಾರ್ಥಗಳನ್ನು ಬಳಸಿ ಪನೀರ್ ರೂಪದಲ್ಲಿ ತಯಾರಿಸುವ ಉತ್ಪನ್ನವನ್ನು ಅನಲಾಗ್ ಅಥವಾ ನಾನ್-ಡೈರಿ ಪನೀರ್ ಎಂದು ಪರಿಗಣಿಸಲಾಗುತ್ತದೆ.

ಇಂತಹ ಉತ್ಪನ್ನಗಳನ್ನು ‘ಪನೀರ್’ ಎಂದು ಲೇಬಲ್ ಮಾಡುವುದು, ಮಾರುಕಟ್ಟೆ ಮಾಡುವುದು, ಮಾರಾಟ ಮಾಡುವುದು ಅಥವಾ ಗ್ರಾಹಕರಿಗೆ ಪನೀರ್ ಎಂದು ಪರಿಚಯಿಸುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) Food Products Standards and Food Additives Regulations, 2011ರ ನಿಯಮಗಳ ಪ್ರಕಾರ, ಪನೀರ್ ಎನ್ನುವುದು ಹಾಲಿನಿಂದ ತಯಾರಿಸಲಾದ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ. ಪನೀರ್‌ನಲ್ಲಿ ಹಾಲಿನ ಕೊಬ್ಬು ಪ್ರಮುಖ ಅಂಶವಾಗಿದ್ದು, ಅದರ ಬದಲಿಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಹಾಲೇತರ ಪದಾರ್ಥಗಳನ್ನು ಬಳಸಲು ಅನುಮತಿ ಇಲ್ಲ ಎಂದು ಇಲಾಖೆ ತಿಳಿಸಿದೆ.

File photo
ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ; ಕಾರಣ ಏನು?

ಕರ್ನಾಟಕದಲ್ಲಿ ಈಗಾಗಲೇ ಹಲವು ಪನೀರ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ತರಕಾರಿ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಪದಾರ್ಥಗಳಿಂದ ಪನೀರ್ ಕಲಬೆರಕೆ ಮಾಡಿರುವುದು ಕಂಡುಬಂದಿಲ್ಲ ಎಂದು ಇಲಾಖೆ ಹೇಳಿದೆ.

ಆದಾಗ್ಯೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ನಿರ್ದಿಷ್ಟ ಗುಣಮಟ್ಟದ ಮಾನದಂಡಗಳನ್ನು FSSAI ಇನ್ನೂ ನಿಗದಿಪಡಿಸದ ಅಥವಾ ಪ್ರಮಾಣೀಕರಿಸದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಈ ನಿಷೇಧ ಅನ್ವಯಿಸುತ್ತದೆ. ಈಗಾಗಲೇ ಪ್ರತ್ಯೇಕ ಗುಣಮಟ್ಟದ ಮಾನದಂಡಗಳ ಅಡಿಯಲ್ಲಿ ಬರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಮತ್ತು ಮಿಶ್ರ ಕೊಬ್ಬಿನ ಸ್ಪ್ರೆಡ್‌ಗಳಂತಹ ಪ್ರಮಾಣೀಕೃತ ಆಹಾರ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಇದಲ್ಲದೆ, ಯಾವುದೇ ಆಹಾರ ವ್ಯಾಪಾರಸ್ಥರು ಅನಲಾಗ್/ನಾನ್-ಡೈರಿ ಪನೀರ್ ಅನ್ನು ಯಾವುದೇ ಆಹಾರ ಉತ್ಪನ್ನ ಅಥವಾ ಆಹಾರ ಪದಾರ್ಥದ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ನಿಷೇಧದ ಆದೇಶವನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ. ಆಹಾರ ವ್ಯಾಪಾರಸ್ಥರು ಆದೇಶದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.

ಕೃತಕ ಪನ್ನೀರ್, ಆಹಾರ ಬಣ್ಣ, ಅಜಿನಮೊಟೊ ವಿರುದ್ಧ ಕ್ರಮ

ಈ ನಡುವೆ ಮಂಗಳೂರಿನಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು, ಆಹಾರ ಸುರಕ್ಷತೆ ಕಾಪಾಡಲು ಪ್ರತಿಯೊಂದು ಸಂದರ್ಭದಲ್ಲೂ ಅಧಿಕಾರಿಗಳಿಂದ ದಾಳಿ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್‌ಗಳನ್ನು ರಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

60 ವರ್ಷ ಮೇಲ್ಪಟ್ಟವರು ಸೇರಿದಂತೆ ಸಾಮಾಜಿಕ ಕೆಲಸದಲ್ಲಿ ಆಸಕ್ತಿ ಹೊಂದಿರುವವರನ್ನು ಈ ತಂಡಗಳಲ್ಲಿ ಸೇರಿಸಿ ಆಹಾರ ಸುರಕ್ಷತೆ ಹಾಗೂ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದರು.

ಕೃತಕ ಪನ್ನೀರ್ ಬಳಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಅದರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಖಾದರ್ ಹೇಳಿದರು.

ಅದೇ ರೀತಿ ಕೃತಕ ಆಹಾರ ಬಣ್ಣದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಜಿನಮೊಟೊವನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ, ಅದರ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಗುಟ್ಕಾ, ಪಾನ್‌ಮಸಾಲಾ ಹಾಗೂ ನಕಲಿ ಔಷಧಗಳ ಮೇಲೂ ಕಣ್ಣು

ಇದೇ ವೇಳೆ ಗುಟ್ಕಾ ಮತ್ತು ಪಾನ್‌ಮಸಾಲಾದಲ್ಲಿ ನಿಕೋಟಿನ್ ಸೇರಿಸಿ ಮಾರಾಟ ಮಾಡುವ ಕಂಪನಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಎಚ್ಚರಿಕೆ ನೀಡಿದ್ದಾರೆ.

ವಿಮಾನಗಳಿಗೆ ಆಹಾರ ಮತ್ತು ಇತರ ವಸ್ತುಗಳ ಸರಬರಾಜಿಗೆ ಸಂಬಂಧಿಸಿದಂತೆ ಪೂರೈಕೆ ಕಂಪನಿಗಳೊಂದಿಗೆ ಚರ್ಚಿಸಲಾಗುವುದು. ನಕಲಿ ಔಷಧಗಳ ಜಾಲದ ವಿರುದ್ಧ ಎಸ್‌ಐಟಿ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದರು.

ಹೋಟೆಲ್‌ಗಳು, ಔಷಧ ಮಳಿಗೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ 400ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು.

ಕೋಳಿ ಮಾಂಸವನ್ನು ಎಷ್ಟು ದಿನ ಸಂಗ್ರಹಿಸಬಹುದು ಎಂಬುದರ ಕುರಿತು ದೇಶದಲ್ಲಿ ನಿಯಮಗಳಿದ್ದು, ಈ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಖಾದರ್ ಹೇಳಿದರು. ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸಕ್ಕರೆ ಪ್ರಮಾಣದ ಬಗ್ಗೆಯೂ ಸೂಕ್ತ ನಿಯಮಗಳನ್ನು ರೂಪಿಸುವ ಅಗತ್ಯವಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಗಮನಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com