

ಹಾಸನ: ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಹಾಸನದಲ್ಲಿ ಜೆಡಿಎಸ್ ಶಾಸಕರಾದ ಎ.ಮಂಜು, ಎಚ್.ಪಿ.ಸ್ವರೂಪ್ ಪ್ರಕಾಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರೇವಣ್ಣ ಅವರು, ಜಿಲ್ಲಾಧಿಕಾರಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೊ ಗೊತ್ತಿಲ್ಲ ಎಂದು ಹರಿಹಾಯ್ದರು.
ಅದು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಈ ಡಿಸಿನಾ? ನಮ್ಮ ಮತದಾರರು ಹೆಚ್ಚು ಇರುವ ಕಡೆ ಗ್ರಾ.ಪಂ.ಚುನಾವಣೆಗೆ ಮೀಸಲಾತಿ ಬದಲಾಯಿಸಿದ್ದಾರೆ. ತಹಶೀಲ್ದಾರ್ ಕಳುಹಿಸಿರುವುದನ್ನು ಬದಲಾಯಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸತತವಾಗಿ ಈ ರೀತಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವೆಲ್ಲಾ ನಡಿತಿರೋದು. ಈ ಜಿಲ್ಲಾಧಿಕಾರಿ ಡ್ರಾಮ ಮಾಸ್ಟರ್ ಇದ್ದಂಗೆ. ಎಲ್ಲೂ ಹೊರಗಡೆ ಹೋಗಲ್ಲ, ಬರೀ ಸಭೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಈ ಜಿಲ್ಲಾಧಿಕಾರಿ, ಯಾವ ಆಧಾರದ ಮೇಲೆ ಮೀಸಲಾತಿ ಬದಲಾಯಿಸಿದರು? ಕರಡು ಪ್ರತಿ ಹಾಕಬೇಕಿತ್ತು. ಕೇಂದ್ರದ ಎಲೆಕ್ಷನ್ ಕಮಿಷನರ್ ಅವರನ್ನು ಬಿಜೆಪಿ ಏಜೆಂಟ್ ಅಂತಾರೆ. ಒಂದು ವಾರ ಗಡುವು ಕೊಡುತ್ತೇವೆ. ಮೀಸಲಾತಿ ಪಟ್ಟಿ ಸರಿಪಡಿಸಬೇಕು. ಇಲ್ಲವಾದಲ್ಲಿ ನಾಲ್ಕು ಜನ ಜೆಡಿಎಸ್ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಏನಾದರೂ ಘಟನೆ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.