

ಪುತ್ತೂರು (ದಕ್ಷಿಣ ಕನ್ನಡ): ದಾಖಲೆಯೊಂದರ ಲ್ಯಾಮಿನೇಷನ್ ಮಾಡಿಸುವಾಗ ಉಂಟಾದ ಸಮಸ್ಯೆಯಿಂದಾಗಿ ಪುತ್ತೂರಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ದೊಡ್ಡ ಗಲಾಟೆ ನಡೆದಿದೆ. ಅದರಲ್ಲೂ, ಪುತ್ತೂರು ಪೊಲೀಸರು ಜೆರಾಕ್ಸ್ ಅಂಗಡಿಯವನನ್ನು ಬಂಧಿಸಿ ಕರೆದುಕೊಂಡು ಹೋಗುತಿರುವಾಗಲು ಮಾರಾಮಾರಿ ನಡೆದಿದ್ದು, ಪ್ರಕರಣ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಗಳಾದ ಫಾತಿಮತ್ ಮಿಸ್ವಾನ್ ಮತ್ತು ಮುಬಾಶಿರಾ ಅವರು ದರ್ಬೆಯ ಡ್ರೀಮ್ ಡೆಸ್ಟಿನೇಶನ್ ಡಿಜಿಟಲ್ ಸೇವಾ ಕೇಂದ್ರಕ್ಕೆ ತಮ್ಮ ಪ್ರಮುಖ ದಾಖಲೆಯೊಂದರ ಜೆರಾಕ್ಸ್ ಹಾಗೂ ಲ್ಯಾಮಿನೇಷನ್ ಮಾಡಿಸಲು ಬಂದಿದ್ದರು. ಆದರೆ, ಲ್ಯಾಮಿನೇಷನ್ ಮಾಡುವ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಆ ದಾಖಲಾತಿಯು ಸುಟ್ಟುಹೋಗಿದೆ (ಮೆಲ್ಟ್ ಆಗಿದೆ). ಇದರಿಂದ ಆಕ್ರೋಶಗೊಂಡ ಗ್ರಾಹಕರು ಮತ್ತು ಅಂಗಡಿಯ ಮಾಲೀಕರಾದ ಅಂಜನಾ ಪೈ (50) ಹಾಗೂ ಅವರ ಮಗ ಸುದರ್ಶನ್ ಪೈ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಇದು ನಂತರ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇನ್ನು, ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ದಾಖಲಾಗಿರುವ 3 ಪ್ರತ್ಯೇಕ ಪ್ರಕರಣಗಳು:
ಪೊಲೀಸರು ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಮೂರು ಪ್ರತ್ಯೇಕ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ:
ಗ್ರಾಹಕರ ದೂರು (ಮೊದಲ ಪ್ರಕರಣ): ದಾಖಲೆ ಹಾಳು ಮಾಡಿರುವುದನ್ನು ಪ್ರಶ್ನಿಸಿದಾಗ ಅಂಗಡಿ ಮಾಲೀಕ ಸುದರ್ಶನ್ ಪೈ ಮತ್ತು ಅಂಜನಾ ಪೈ ಅವರು ತಮ್ಮ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಗ್ರಾಹಕರು ದೂರು ನೀಡಿದ್ದಾರೆ.
ಅಂಗಡಿ ಮಾಲೀಕರ ದೂರು (ಎರಡನೇ ಪ್ರಕರಣ): ತಾಂತ್ರಿಕ ದೋಷದಿಂದ ದಾಖಲೆ ಹಾಳಾದಾಗ ಗ್ರಾಹಕರು ₹10,000 ಹಣ ನೀಡುವಂತೆ ಒತ್ತಾಯಿಸಿದರು. ಅದನ್ನು ಸಮಾಧಾನಪಡಿಸಲು ಹೋದಾಗ ವಿಡಿಯೋ ಮಾಡಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಂಜನಾ ಪೈ ಅವರು ಮುಬಾಶಿರಾ, ಮುಬಾರಿಶ್, ನೌಶಾದ್ ಮತ್ತಿತರರ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ (ಮೂರನೇ ಪ್ರಕರಣ): ಸ್ಥಳದಲ್ಲಿ ಗಲಾಟೆ ತೀವ್ರಗೊಂಡು ಸಾರ್ವಜನಿಕರು ಜಮಾಯಿಸಿದಾಗ, ಪರಿಸ್ಥಿತಿ ತಿಳಿಗೊಳಿಸಲು ಬಂದ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಮತ್ತು ಸಿಬ್ಬಂದಿಯ ಕರ್ತವ್ಯಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಗಲಾಟೆ ಮಾಡಿದವರನ್ನು ಠಾಣೆಗೆ ಕರೆದೊಯ್ಯುವಾಗ ಪೊಲೀಸರನ್ನು ತಡೆದಿದ್ದಕ್ಕಾಗಿ ನಿಯಾಝ್, ನೌಶಾದ್ ಹಾಗೂ ಇತರರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಮುಂದುವರೆದು, ಸ್ಥಳದಲ್ಲಿ ಜನ ಜಮಾಯಿಸಿದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಸುಳ್ಳು ಅಥವಾ ಪ್ರಚೋದನಕಾರಿ ವದಂತಿಗಳನ್ನು ಹಬ್ಬಿಸಬಾರದು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.