

ದೊಡ್ಡಬಳ್ಳಾಪುರ : ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ.
ಕೇಂದ್ರೀಯ ತನಿಖಾ ಸಂಸ್ಥೆಗಳು ನೀಡಿದ ಗೌಪ್ಯ ಮಾಹಿತಿಯನ್ನಾಧರಿಸಿ ದೊಡ್ಡಬಳ್ಳಾಪುರ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ಆರೋಪಿ ಸೈಯದ್ ಅಬೂಬಕರ್ ಕಳೆದ ಎರಡು ವರ್ಷಗಳಿಂದ ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳು ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಜಾಲದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು.
ಅಲ್ಲದೆ, ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ವೀಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ ಈತ, ಅವರಿಗೆ ತನ್ನ ಗುರುತಿನ ಚೀಟಿ ಮತ್ತು ಪ್ರಮುಖ ವಿವರಗಳನ್ನು ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ. ಈತನ ಮೊಬೈಲ್ ಫೋನ್ ತಪಾಸಣೆ ನಡೆಸಿದಾಗ ಪಿಸ್ತೂಲ್‌ಗಳ ಹಲವಾರು ಫೋಟೋಗಳು ಪತ್ತೆಯಾಗಿವೆ.
ಪೊಲೀಸರ ಮಾಹಿತಿಯಂತೆ, ಆರೋಪಿ ಸೈಯದ್ ಅಬೂಬಕರ್ ದೆಹಲಿ ಮತ್ತು ಕೇರಳದಲ್ಲಿ ತರಬೇತಿ ಪಡೆದಿದ್ದು, ಮಸೀದಿಯೊಂದರಲ್ಲಿ ಪಾಠ ಕೂಡ ಮಾಡುತ್ತಿದ್ದನು. ಈತ ಸ್ಥಳೀಯವಾಗಿ ನೆಟ್‌ವರ್ಕ್ ಬೆಳೆಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳು ಅಥವಾ ಅಕ್ರಮ ಹಣಕಾಸು ವಹಿವಾಟು ನಡೆಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಆರೋಪಿ ಸೈಯದ್ ಅಬೂಬಕರ್ ತನ್ನ ಮೊಬೈಲ್ನಲ್ಲಿ sayedabudakar313 ಹೆಸರಿನ ಇನ್ಸ್ಟಾಗ್ರಾಂ ಅಕೌಂಟ್ ಬಳಸುತ್ತಿದ್ದ. Hammadmemon 333 ಹೆಸರಿನ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದ ವಿಡಿಯೋ ರೀಲ್ಸ್ಗಳಿಗೆ ಲೈಕ್ ಕೊಟ್ಟು ಈ ವಿಡಿಯೋಗಳನ್ನ ತನ್ನ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದ. ಈ ವಿಡಿಯೋಗಳು ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳಿಗೆ ಸಂಬಂಧಿಸಿದ ವಿಡಿಯೋಗಳಾಗಿದ್ದವು.
ಕಾರ್ಯಾಚರಣೆ ವೇಳೆ ಪೊಲೀಸರು ಈತನಿಂದ ಹಲವು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಶಂಕಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜ್ಯದಲ್ಲಿ ಅಥವಾ ದೇಶದ ಇನ್ಯಾವುದೇ ಭಾಗದಲ್ಲಿ ಈತನಿಗೆ ಸಹಾಯ ಮಾಡಿದವರು ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಬಂಧಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಉಗ್ರವಾದಿ ಕೃತ್ಯಗಳ ವಿಭಾಗ 113(3) ಹಾಗೂ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಕೃತ್ಯಗಳ ವಿಭಾಗ 197(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.