ಪುತ್ತೂರು ಸೇವಾ ಕೇಂದ್ರದಲ್ಲಿ ದಾಖಲೆ ವಿಚಾರಕ್ಕೆ ಗಲಾಟೆ: ಓರ್ವನ ಬಂಧನ

ಶುಕ್ರವಾರ ನಡೆದ ಈ ಘಟನೆಯಲ್ಲಿ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪಗಳು ಕೇಳಿಬಂದಿವೆ.
File photo
ಸಂಗ್ರಹ ಚಿತ್ರ
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ಪ್ರದೇಶದಲ್ಲಿರುವ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ದಾಖಲೆಗಳಿಗೆ ಸಂಬಂಧಿಸಿದ ವಿವಾದ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಓರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ.

ಶುಕ್ರವಾರ ನಡೆದ ಈ ಘಟನೆಯಲ್ಲಿ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪಗಳು ಕೇಳಿಬಂದಿವೆ.

ಡಿಜಿಟಲ್ ಸೇವಾ ಕೇಂದ್ರದಲ್ಲಿನ ತಾಂತ್ರಿಕ ದೋಷದಿಂದ ಕೆಲವು ದಾಖಲೆಗಳು ಹಾನಿಗೊಳಗಾದ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭವಾಗಿ ಬಳಿಕ ಗಲಾಟೆ ನಡೆದಿದೆ ಎನ್ನಲಾಗಿದೆ.

ಮೊದಲ ಪ್ರಕರಣದಲ್ಲಿ ದೂರು ನೀಡಿರುವ ಮಹಿಳೆ, ಡಿಜಿಟಲ್ ಸೇವಾ ಕೇಂದ್ರದಲ್ಲಿನ ತಾಂತ್ರಿಕ ದೋಷದಿಂದ ತಮ್ಮ ದಾಖಲೆಗಳು ಹಾನಿಗೊಳಗಾಗಿದ್ದವು ಎಂದು ಆರೋಪಿಸಿದ್ದಾರೆ. ದಾಖಲೆಗಳನ್ನು ಸರಿಪಡಿಸಬೇಕು ಅಥವಾ ಹೊಸ ದಾಖಲೆಗಳನ್ನು ಪಡೆಯಲು ತಗಲುವ ₹300 ವೆಚ್ಚವನ್ನು ಪಾವತಿಸಬೇಕು ಎಂದು ಅಂಗಡಿ ಮಾಲೀಕರಾದ ಅಂಜನಾ ಪೈ ಮತ್ತು ಸುದರ್ಶನ್ ಪೈ ಅವರನ್ನು ಕೇಳಿದಾಗ, ಇಬ್ಬರೂ ತಮ್ಮ ಮೇಲೆ ಹಾಗೂ ಇತರ ಇಬ್ಬರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 29 ವರ್ಷದ ಸುದರ್ಶನ್ ಪೈ ಅವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

File photo
ಲ್ಯಾಮಿನೇಷನ್ ವಿಚಾರಕ್ಕೆ ಭಾರಿ ಗಲಾಟೆ; 3 ಪ್ರತ್ಯೇಕ ಕೇಸ್ ದಾಖಲು, ಓರ್ವ ಆರೋಪಿಗೆ ನ್ಯಾಯಾಂಗ ಬಂಧನ

ಪ್ರತಿ ದೂರು ದಾಖಲಿಸಿದ ಅಂಜನಾ ಪೈ

ಇದಕ್ಕೆ ಪ್ರತಿಯಾಗಿ ಅಂಜನಾ ಪೈ ಕೂಡ ದೂರು ನೀಡಿದ್ದು, ವಿವಾದದ ವೇಳೆ ಗ್ರಾಹಕರಾದ ಫಾತಿಮತ್ ಮಿಸ್ವಾನ್, ಮುಬಶಿರಾ, ಮುಬಾರಿಶ್ ಹಾಗೂ ನೌಶಾದ್ ಅವರು ತಮ್ಮನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್‌ 115(2), 352, 351(2), 79 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ನೌಶಾದ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನೂ ದಾಖಲಿಸಿದ್ದಾರೆ.

ಈ ಪ್ರಕರಣವನ್ನು BNS 2023ರ ಸೆಕ್ಷನ್‌ 126(2), 352, 115(2), 351(2) ಮತ್ತು 3(5) ಅಡಿಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com