

ಬೆಂಗಳೂರು : ಒಂದು ಛಾಯಾಚಿತ್ರ ಕೇವಲ ಚಿತ್ರವಲ್ಲ,ಅದು ವ್ಯಕ್ತಿಯ ಬದುಕು, ಸಮಾಜದ ಬೆಳವಣಿಗೆ ಹಾಗೂ ಕಾಲಘಟ್ಟದ ಇತಿಹಾಸವನ್ನು ದಾಖಲಿಸುವ ಮಹತ್ವದ ಸಾಕ್ಷಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಛಾಯಾಗ್ರಾಹಕರ ಸಂಘ ಬೆಂಗಳೂರು (ರಿ.) ವತಿಯಿಂದ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನ"ದ ಅಂಗವಾಗಿ 'ಫ್ರೋಜನ್ ಮೆಮೊರೀಸ್' - ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಕ್ಕೆ ಭೇಟಿ ನೀಡಿ ಮಾತನಾಡಿದ ಅವರು ,ಒಬ್ಬ ವ್ಯಕ್ತಿಯ ಇತಿಹಾಸವನ್ನು ದಾಖಲಿಸುವಲ್ಲಿ ಛಾಯಾಚಿತ್ರದ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ನಿಮ್ಮದೊಂದು ಚಿತ್ರ ಒಂದು ವರ್ಷದ್ದಾಗಿರಬಹುದು, 50, 100 ವರ್ಷದ್ದಾಗಿರಬಹುದು ಅಥವಾ ಅದಕ್ಕಿಂತಲೂ ಹಳೆಯದಾಗಿರಬಹುದು. ಆದರೆ ಅದು ಒಬ್ಬ ವ್ಯಕ್ತಿಯ ಇತಿಹಾಸವನ್ನು ಬರೆಯುವಂತ ಸಾಕ್ಷಿಯಾಗುತ್ತದೆ. ಒಂದು ಚಿತ್ರ ಸಣ್ಣದು ಎಂದು ಭಾವಿಸಬಾರದು. ನಮ್ಮ ಬದುಕಿನಲ್ಲಿ ನಡೆದ ಘಟನೆಗಳಿಗೆ ಸಾಕ್ಷಿ ಏನು ಎಂಬುದನ್ನು ತೋರಿಸುವಲ್ಲಿ ಛಾಯಾಚಿತ್ರದ ಪಾತ್ರ ಬಹಳ ದೊಡ್ಡದು, ಎಂದು ಅಭಿಪ್ರಾಯಪಟ್ಟರು
ಒಂದು ಚಿತ್ರ ನೂರಾರು ಅರ್ಥಗಳನ್ನು ನೀಡಬಲ್ಲದು. ಕಾಲ ಕಳೆದಂತೆ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಛಾಯಾಗ್ರಾಹಕರು ಸೆರೆಹಿಡಿಯುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಪೀಳಿಗೆಗೆ ದಾಖಲೆಯಾಗಬಹುದು ಎಂದು ಹೇಳಿದರು.
ಕಿವಿಯಿಂದ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದಕ್ಕೆ ಜನರು ಹೆಚ್ಚಿನ ನಂಬಿಕೆ ಇಡುತ್ತಾರೆ. ಮಾಧ್ಯಮದಲ್ಲೂ ಇದೇ ಕಾರಣಕ್ಕೆ ಚಿತ್ರಕ್ಕೆ ಬಹಳ ಮಹತ್ವವಿದೆ,” ಎಂದು ಹೇಳಿದರು. ಪತ್ರಿಕೆಯಲ್ಲಿ ಎಷ್ಟೇ ಆಳವಾದ ವಾಸ್ತವಾಂಶಗಳನ್ನು ಪ್ರಕಟಿಸಿದರೂ, ಅದರೊಂದಿಗೆ ಸೂಕ್ತ ಚಿತ್ರವಿಲ್ಲದಿದ್ದರೆ ಓದುಗರ ಮೇಲೆ ಸುದ್ದಿಯ ಪರಿಣಾಮ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ದೃಶ್ಯ ಮಾಧ್ಯಮಗಳು ವೇಗವಾಗಿ ಬೆಳೆದಿವೆ ಎಂದರು.
ಯಾವುದೇ ಪತ್ರಿಕೆಯಾಗಿರಲಿ, ಎಷ್ಟೇ ಆಳವಾಗಿ ವಾಸ್ತವಾಂಶ ಬರೆದಿದ್ದರೂ ಅದರೊಂದಿಗೆ ಒಂದು ಚಿತ್ರ ಇಲ್ಲದಿದ್ದರೆ ಆ ಸುದ್ದಿಯ ಬೆಲೆ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಟಿವಿ ಮಾಧ್ಯಮ ಇಷ್ಟು ದೊಡ್ಡ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ನಂತರ ಸಾಮಾಜಿಕ ಮಾಧ್ಯಮವೂ ವೇಗವಾಗಿ ಬೆಳೆಯಿತು. ಟಿವಿಯಲ್ಲಿ ಜನರು ಕಣ್ಣಾರೆ ನೋಡುವ ಚಿತ್ರಗಳನ್ನು ಹೆಚ್ಚು ನಂಬುತ್ತಾರೆ,” ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದ್ದರೂ ಅವರ ವ್ಯಾಪ್ತಿ ಅಪಾರವಾಗಿದೆ. ಸ್ಥಳೀಯವಾಗಿ ತೆಗೆದ ಒಂದು ಚಿತ್ರ ಕೆಲವೇ ಕ್ಷಣಗಳಲ್ಲಿ ರಾಜ್ಯದಾದ್ಯಂತ, ದೇಶದಾದ್ಯಂತ ಹಾಗೂ ಜಗತ್ತಿನಾದ್ಯಂತ ತಲುಪುವ ಸಾಮರ್ಥ್ಯ ಹೊಂದಿದೆ ಎಂದರು.
“ನೀವು ಇಲ್ಲಿ 40 ಜನ ಇರಬಹುದು, 100 ಜನ ಇರಬಹುದು ಅಥವಾ 4,000 ಜನ ಇರಬಹುದು. ಆದರೆ ನಿಮ್ಮ ಕ್ಯಾಮೆರಾದ ಮೂಲಕ ಹೊರಬರುವ ಚಿತ್ರಗಳನ್ನು ರಾಜ್ಯದ ಏಳು ಕೋಟಿ ಜನರು ನೋಡುತ್ತಾರೆ. ನಿಮ್ಮ ಸಂದೇಶ ಮತ್ತು ಚಿತ್ರಗಳು ಇಡೀ ವಿಶ್ವವನ್ನೇ ತಲುಪುತ್ತವೆ. ಹೀಗಾಗಿ ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ,” ಎಂದು ಹೇಳಿದರು.
ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಮುಖ್ಯಮಂತ್ರಿ ಹೇಳಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಒಂದೇ ರೀತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ನಾನು ಖಂಡಿತವಾಗಿ ಆಲೋಚಿಸುತ್ತೇನೆ ಎಂದರು.
ನಿಮ್ಮ ಸಮಸ್ಯೆಗಳು ಏನು ಎಂಬುದು ನನಗೆ ಅರಿವಿದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಕಾನೂನು ಚೌಕಟ್ಟಿನೊಳಗೆ ನಿಮಗೆ ಯಾವ ರೀತಿಯಲ್ಲಿ ನೆರವು ನೀಡಲು ಸಾಧ್ಯವೋ ಅದನ್ನು ಖಂಡಿತವಾಗಿ ಮಾಡುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಧ್ಯಮವು ರಾಜಕೀಯ ವ್ಯವಸ್ಥೆಯ ಸಮಾನಾಂತರ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ನಾನು ಮುಖ್ಯಮಂತ್ರಿ ಆಗಿರುವುದು ಮುಖ್ಯವಲ್ಲ. ರಾಜಕೀಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲೂ ನೀವು ಸಮಾನಾಂತರವಾಗಿ ಬೆಂಬಲವಾಗಿ ನಿಂತಿದ್ದೀರಿ. ಜನರನ್ನು ಬೆಳೆಸಿದ್ದೀರಿ, ನಾಯಕರನ್ನು ಬೆಳೆಸಿದ್ದೀರಿ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ದಾಖಲಿಸುವ ಮೂಲಕ ಇತಿಹಾಸವನ್ನು ಕಟ್ಟಿಕೊಟ್ಟಿದ್ದೀರಿ,” ಎಂದರು. ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳ ಶ್ರಮ, ಸೇವೆ ಮತ್ತು ಸೃಜನಶೀಲತೆಯನ್ನು ಅಭಿನಂದಿಸಿದ ಮುಖ್ಯಮಂತ್ರಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.