'ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ: ದೇಶದಲ್ಲಿರುವ ಅಸಮಾನತೆ ಹೋಗುವವರೆಗೂ ಮೀಸಲಾತಿ ಇರಲೇಬೇಕು'

ಬುದ್ಧನ ಕಾಲದಿಂದಲೂ ಇಲ್ಲಿ ಜಾತಿ ವ್ಯವಸ್ಥೆ ಇದೆ, ಅದರ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿದೆ, ಇದು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೂ ಇನ್ನೂ ಜಾತಿ ಜೀವಂತವಿದೆ ಎನ್ನುವುದು ವಿಪರ್ಯಾಸ ಎಂದು ಜಾತಿ ವ್ಯವಸ್ಥೆಯೆಡೆಗಿನ ತಮ್ಮ ಬೇಸರ ಹೊರಹಾಕಿದರು.
Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು, ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಪರಿಣಾಮವಾಗಿ ಶೋಷಣೆಗೆ ಒಳಗಾದವರಿಗೆ, ಅವಕಾಶ ವಂಚಿತರಿಗೆ ಮೀಸಲಾತಿ ಸಿಗಲೇಬೇಕು. ನಾವು ಮೂರ್ಖರಲ್ಲ, ಅವಕಾಶದಿಂದ ವಂಚಿತರಾದವರು. ನಮ್ಮ ಬುದ್ಧಿಶಕ್ತಿ ತೋರಿಸಲು ಇದುವರೆಗೆ ಅವಕಾಶ ದೊರಕಿರಲಿಲ್ಲ. ಈಗ ಆ ಅವಕಾಶವನ್ನು ಮೀಸಲಾತಿ ವ್ಯವಸ್ಥೆಯೇ ಒದಗಿಸುತ್ತಿದೆ ಎಂದರು.

ಎಲ್ಲಿಯವರೆಗೆ ಸಮಾನ ಅವಕಾಶಗಳು ಸಿಗುವುದಿಲ್ಲ, ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ. ಈ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ಬರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು.

ಬುದ್ಧನ ಕಾಲದಿಂದಲೂ ಇಲ್ಲಿ ಜಾತಿ ವ್ಯವಸ್ಥೆ ಇದೆ, ಅದರ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿದೆ, ಇದು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೂ ಇನ್ನೂ ಜಾತಿ ಜೀವಂತವಿದೆ ಎನ್ನುವುದು ವಿಪರ್ಯಾಸ ಎಂದು ಜಾತಿ ವ್ಯವಸ್ಥೆಯೆಡೆಗಿನ ತಮ್ಮ ಬೇಸರ ಹೊರಹಾಕಿದರು.

Siddaramaiah
ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ಯಾರು? ಮುನಿಯಪ್ಪ ಸಮಾಜ ಕಲ್ಯಾಣ ಖಾತೆ ಪಡೆದಿದ್ದು ಹೇಗೆ ಗೊತ್ತಾ; ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

1949ರ ನವೆಂಬರ್‌ 25ರಂದು ಸಂವಿಧಾನ ಅಂಗೀಕಾರವಾಗುವ ಹಿಂದಿನ ದಿನ ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ್ದ “ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಸಮಾನತೆ ಎನ್ನುವುದು ಸಂವಿಧಾನದ ಆಶಯವಾಗಿದೆ. ಸಮಸಮಾಜ ನಿರ್ಮಾಣ ಆಗಲೇಬೇಕು. ನಮಗೆ ಮತದಾನದ ಹಕ್ಕು ಕೊಟ್ಟಿದ್ದಾರೆ, ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಪ್ರಜೆಯ ವರೆಗೆ ಪ್ರತಿಯೊಬ್ಬರ ಮತಕ್ಕೂ ಒಂದೇ ಮೌಲ್ಯ ಇದೆ.

ಆದರೆ ಇದೇ ಮಾದರಿಯ ಸಮಾನತೆ ಸಾಮಾಜಿಕವಾಗಿ, ಆರ್ಥಿಕವಾಗಿ ಸಾದ್ಯವಾಗಿಲ್ಲ. ಇದನ್ನು ಸರಿಪಡಿಸದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ, ಸಮಾನತೆ ಸಾದ್ಯವಾಗದೆ ಹೋದರೆ ಮುಂದೊಂದು ದಿನ ಶೋಷಣೆಗೆ ಒಳಗಾದ ಜನರೇ ಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎನ್ನುವ ಮಾತನ್ನು ಸ್ಮರಿಸಿದರು.

“ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ, ಎನ್ನ ಮನೆ ಮಗನೆಂದೆನಿಸಯ್ಯ ಕೂಡಲಸಂಗಮದೇವ” ಎಂದು 850 ವರ್ಷಗಳ ಹಿಂದೆ ಬಸವಣ್ಣನವರು ಹೇಳಿದ್ದರು, ಇಂದಿಗೂ ಇದು ಸಾಧ್ಯವಾಗಿಲ್ಲ. ಇದು ಸಮಾಜದ ನೈಜ ಚಿತ್ರಣ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಸಮಾಜ ಅರ್ಥಮಾಡಿಕೊಳ್ಳುವ ವಯಸ್ಸು ಆದಾಗಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಇದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ. ನಾನು ಬಿ.ಎಸ್.ಸಿ ಓದುವಾಗ ಕಾಲೇಜಿಗೆ ರಜೆ ಸಿಕ್ಕರೆ ಊರಿಗೆ ಹೋಗುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ನಮ್ಮ ತಂದೆ ನನಗೆ ಮನೇಲಿರುವ ದನ-ಕರುಗಳಿಗೆ ನೀರು ಹಾಕುವ ಕೆಲಸ ಕೊಡುತ್ತಿದ್ದರು. ಆಗ ಬಾವಿಯಿಂದ ನೀರನ್ನು ಮೇಲೆತ್ತಿ ಹಾಕಬೇಕಿತ್ತು, ಬಾವಿಯೊಳಗೆ ಗೂಡುಕಟ್ಟುತ್ತಿದ್ದ ಪಕ್ಷಿಗಳಿಂದಾಗಿ ನೀರಿನಲ್ಲಿ ಸಾಕಷ್ಟು ಕಸ ತುಂಬಿರುತ್ತಿತ್ತು, ನಾನು ಕೊಡವನ್ನು ಮೇಲೆ ಕೆಳಗೆ ಮಾಡಿ ಕಸವನ್ನು ಬದಿಗೆ ಸರಿಸಿ ನೀರು ಸೇದಿಕೊಂಡು ಹೋಗುತ್ತಿದ್ದೆ. ನಾನು ಮನೆಗೆ ಹೋಗಿ ಕೆಲ ಸಮಯ ಬಿಟ್ಟು ವಾಪಾಸು ಬರುವ ಹೊತ್ತಿಗೆ ಕಸ ಮತ್ತೆ ಬಾವಿಯ ಮಧ್ಯದಲ್ಲಿ ಬಂದಿರುತ್ತಿತ್ತು. ಇದೇ ರೀತಿ ಎಷ್ಟೇ ಸುಧಾರಣೆಗಳಾದರೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಂಡಿದೆ. ಹೀಗೆ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯದ ನೆನಪನ್ನು ಜಾತಿ ವ್ಯವಸ್ಥೆಯ ಜಡತ್ವಕ್ಕೆ ಹೋಲಿಸಿ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com