

ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಬಳಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಅಂದರೆ ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಇದರ ಅನುಷ್ಠಾನಕ್ಕೆ ಬಿಡದಿ ಭಾಗದ ರೈತರು ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ, ರಾಜ್ಯ ಸರ್ಕಾರ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ ಮತ್ತೊಂದು, ಯೋಜನೆಗಾಗಿ 165 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು ಸ್ಥಳೀಯ ರೈತರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ಮೈಸೂರಿನ ವರುಣಾ ವಿಧಾನಸಭಾ ವ್ಯಾಪ್ತಿಯಲ್ಲಿ, ಮೈಸೂರು ವಿಮಾನ ನಿಲ್ದಾಣದ ಸಮೀಪವಿರುವ ಮರಸೇ ಮತ್ತು ಮಾದರಹಳ್ಳಿ ಮುಂತಾದ ಗ್ರಾಮಗಳ ಸುಮಾರು 165 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮುಂದಾಗಿದ್ದು, ಸ್ಥಳೀಯ ರೈತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ರೈತರಿಂದ ಭಾರಿ ವಿರೋಧ!
ಪ್ರಸ್ತಾವಿತ ಭೂಮಿಯಲ್ಲಿ ರೈತರು ಅಡಿಕೆ, ತೆಂಗು, ಬಾಳೆ ಮತ್ತು ಭತ್ತದಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಯೋಜನೆಗಾಗಿ, ಸರ್ಕಾರದಿಂದ ಸುಮಾರು 65ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಲಾಗಿದ್ದು, ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗಾಗಿ ಬಿಟ್ಟುಕೊಡಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. "ನಮ್ಮ ಜೀವನದ ಆಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳ ಸ್ಥಾಪನೆಗೆ ಬಿಟ್ಟುಕೊಡುವುದಿಲ್ಲ" ಎಂದು ಸ್ಥಳೀಯ ರೈತರು ಒಕ್ಕೊರಲಿನಿಂದ ಪಟ್ಟುಹಿಡಿದಿದ್ದಾರೆ. ಹಾಗಾಗಿ, ಬೆಂಗಳೂರು ಸಮೀಪದ ಬಿಡದಿಯಲ್ಲಿ ನಡೆದ ಭೂಸ್ವಾಧೀನ ವಿರೋಧಿ ಚಳವಳಿಯ ಮಾದರಿಯಲ್ಲೇ ಮೈಸೂರು ಜಿಲ್ಲೆಯಲ್ಲೂ ಬೃಹತ್ ಹೋರಾಟ ಮತ್ತು ಪ್ರತಿಭಟನೆಗಳನ್ನು ಸಂಘಟಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ.