

ಬೆಂಗಳೂರು: ರಾಜ್ಯದ ವಸತಿ ರಹಿತರಿಗೆ ಹಾಗೂ ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.
ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50,000 ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಮುಂಬರುವ ಡಿಸೆಂಬರ್ 31ರ ಒಳಗಾಗಿ ಒಟ್ಟು 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಕಂದಾಯ ಇಲಾಖೆ ಸಜ್ಜಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸೆಪ್ಟೆಂಬರ್ 15ರೊಳಗೆ ಸೂಕ್ತ ಸರ್ಕಾರಿ ಜಮೀನುಗಳನ್ನು ಗುರುತಿಸುವಂತೆ ಸೂಚಿಸಿದರು.
ಗುರುತಿಸುವ ಜಮೀನಿಗೆ ರಸ್ತೆ ಹಾಗೂ ನೀರಿನ ಸೌಲಭ್ಯ ಇರಬೇಕು. ಗ್ರಾಮಗಳಿಗೆ ಸಮೀಪದಲ್ಲಿರುವ ಜಮೀನಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ನಿವೇಶನ ಹಂಚಿಕೆಯಲ್ಲಿ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಬೇಕು. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಅಂಗವಿಕಲರು, ವಿಧವೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕಂದಾಯ ಗ್ರಾಮಗಳ ಘೋಷಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 10,896 ಕಂದಾಯ ಗ್ರಾಮಗಳನ್ನು ಘೋಷಿಸುವ ಗುರಿ ಹೊಂದಲಾಗಿದ್ದು, ಈವರೆಗೆ ಕೇವಲ 3,354 ಗ್ರಾಮಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಾಕಿ ಇರುವ ಪ್ರಸ್ತಾವನೆಗಳನ್ನು 15 ದಿನಗಳೊಳಗೆ ಪ್ರಾಥಮಿಕ ಅಧಿಸೂಚನೆಗಾಗಿ ಕಳುಹಿಸಬೇಕು. ಅಂತಿಮ ಅಧಿಸೂಚನೆ ಪ್ರಕ್ರಿಯೆಯನ್ನೂ ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಹಕ್ಕುಪತ್ರ ನೋಂದಣಿಗೆ ಸೆ.30 ಗಡುವು
ಹಂಚಿಕೆ ಮಾಡಿರುವ ಹಕ್ಕುಪತ್ರಗಳ ನೋಂದಣಿ ಪ್ರಕ್ರಿಯೆಯನ್ನೂ ತ್ವರಿತಗೊಳಿಸುವಂತೆ ಪರಮೇಶ್ವರ್ ನಿರ್ದೇಶನ ನೀಡಿದರು. ಈವರೆಗೆ 2.05 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಸುಮಾರು 1.55 ಲಕ್ಷ ಹಕ್ಕುಪತ್ರಗಳು ನೋಂದಣಿಯಾಗಿವೆ. ಉಳಿದ ಹಕ್ಕುಪತ್ರಗಳ ನೋಂದಣಿಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದರು.
24.43 ಕೋಟಿ ಪುಟಗಳ ಭೂ ದಾಖಲೆ ಡಿಜಿಟಲೀಕರಣ ಬಾಕಿ
ಭೂ ದಾಖಲೆಗಳ ಡಿಜಿಟಲೀಕರಣ ಕುರಿತು ಮಾತನಾಡಿದ ಪರಮೇಶ್ವರ್, 10 ಜಿಲ್ಲೆಗಳಲ್ಲಿ ಈ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 21 ಜಿಲ್ಲೆಗಳಲ್ಲಿ ಬಾಕಿ ಇದೆ ಎಂದು ತಿಳಿಸಿದರು. ಒಟ್ಟು 24.43 ಕೋಟಿಗೂ ಹೆಚ್ಚು ಪುಟಗಳ ಭೂ ದಾಖಲೆಗಳನ್ನು ಇನ್ನೂ ಡಿಜಿಟಲೀಕರಣಗೊಳಿಸಬೇಕಿದೆ ಎಂದು ಹೇಳಿದರು.
ಬಗೈರ್‌ಹುಕುಂ ಅರ್ಜಿಗಳ ವಿಲೇವಾರಿಯನ್ನೂ ತ್ವರಿತಗೊಳಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಈವರೆಗೆ 14.37 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು, ಸುಮಾರು 6.99 ಲಕ್ಷ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.