ಬರಪೀಡಿತ ತಾಲೂಕುಗಳ ಪಟ್ಟಿಗೆ ಇನ್ನಷ್ಟು ತಾಲೂಕು ಸೇರ್ಪಡೆ: DCM ಡಾ. ಜಿ. ಪರಮೇಶ್ವರ್

ಆಗಸ್ಟ್‌ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದ ಸಮಗ್ರ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೆಳೆ ಹಾನಿಯ ಅಂದಾಜು ಕಾರ್ಯ ನಡೆಯುತ್ತಿದ್ದು, ಅದರ ವರದಿ ಆಧರಿಸಿ ಬರ ಪರಿಹಾರದ ಮನವಿ ಸಿದ್ಧಪಡಿಸಲಾಗುವುದು.
G. parameshwar
ಜಿ. ಪರಮೇಶ್ವರ್
Updated on

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.

ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಮುಂದಿನ 15 ದಿನಗಳ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇನ್ನಷ್ಟು ತಾಲೂಕುಗಳನ್ನು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಆಗಸ್ಟ್‌ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದ ಸಮಗ್ರ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೆಳೆ ಹಾನಿಯ ಅಂದಾಜು ಕಾರ್ಯ ನಡೆಯುತ್ತಿದ್ದು, ಅದರ ವರದಿ ಆಧರಿಸಿ ಬರ ಪರಿಹಾರದ ಮನವಿ ಸಿದ್ಧಪಡಿಸಲಾಗುವುದು. ಬಳಿಕ ಕೇಂದ್ರದ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬರ ಪರಿಹಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದರು.

ರೈತರಿಗೆ ಪ್ರತಿ ಎಕರೆಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ. ಸದ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದು ಹಾಗೂ ಭೂಕುಸಿತ ತಡೆಯುವ ಕ್ರಮಗಳಿಗೆ ಆದ್ಯತೆ ನೀಡಲಾಗುವುದು.

G. parameshwar
Watch | ಪರಮೇಶ್ವರ್ ಡಿಸಿಎಂ ಮಾಡಿದ್ದು ಯಾರು? ಸಿದ್ದು ಹೇಳಿಕೆಗೆ ಪರಂ ಏನಂದ್ರು?

2023ರ ಬರದಿಂದ ರಾಜ್ಯಕ್ಕೆ ಸುಮಾರು 39,000 ಕೋಟಿ ರೂ. ನಷ್ಟವಾಗಿತ್ತು. ನಾವು 18,000 ಕೋಟಿ ರೂ. ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೆವು. ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಿದ್ದೆವು. ಬಳಿಕ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ 3,500 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಬಾರಿ ಸಮಯಕ್ಕೆ ಸರಿಯಾಗಿ ಪರಿಹಾರ ನೀಡುವಂತೆ ತಾವು ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಅವರು ತಿಳಿಸಿದರು.

“ಬರ ಘೋಷಣೆಗೆ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಮನವಿ ಸಿದ್ಧಪಡಿಸಲಾಗಿದೆ. ಕೇಂದ್ರ ಸರ್ಕಾರ ಇದನ್ನು ಪರಿಶೀಲಿಸಿ ನಮಗೆ ಬರಬೇಕಾದ ಪರಿಹಾರವನ್ನು ನೀಡಲಿ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಅಡಿಯಲ್ಲಿ 1,200 ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿದೆ. ಈ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ನಾವು ಮನವಿ ಮಾಡಿದ್ದೇವೆ,” ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com