

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ನಜೀರ್ ಅಹ್ಮದ್ ನೀಡಿದ ಅವಹೇಳನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕೆರಳಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ನಜೀರ್ ಅಹ್ಮದ್ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸೋಮವಾರ ಪಟ್ಟು ಹಿಡಿದರು.
ಮಂಗಳವಾರವೂ ಕೂಡ ಇದೇ ಗದ್ದಲ ಮುಂದುವರೆಯಿತು. ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ನಜೀರ್ ಅಹ್ಮದ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಭಾಪತಿ ಬಸವರಾಜ ಹೊರಟ್ಟಿ ಕೂಡ ನಜೀರ್ ಅಹ್ಮದ್ ಬೇಷರತ್ ಕ್ಷಮೆಯಾಚಿಸಬೇಕು ಎಂದರು.
ಮಹಾತ್ಮ ಗಾಂಧಿ ನಿಜವಾದ 'ವಿಶ್ವ ಗುರು' ಎಂದು ನಂಬುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ವಿಶ್ವ ಗುರು' ಎಂದು ಕರೆಯುವುದನ್ನು ತಾವು ವಿರೋಧಿಸಿರುವುದಾಗಿ ಕಾಂಗ್ರೆಸ್ ಎಂಎಲ್‌ಸಿ ವಿವರಿಸಿದರು. ತಮ್ಮ ಹೇಳಿಕೆಗಳಿಗಾಗಿ ಶಾಸಕಾಂಗದಿಂದ ಅಮಾನತುಗೊಳ್ಳಲು ಸಿದ್ಧವಾಗಿದ್ದು, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.
ಇದರಿಂದಾಗಿ ಗದ್ದಲ ಮತ್ತಷ್ಟು ಹೆಚ್ಚಾದಾಗ, ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮುಂದೂಡಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ದ ವೇಳೆ ಸೋಮವಾರ, ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ್ರೋಹಿ ಎಂದು ಹೇಳಿದರು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನಜೀರ್ ಅಹ್ಮದ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದು, ಸದಸ್ಯರ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಕೂಡಲೇ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ನಾಳೆಗೆ (ಫೆ.03) ಮುಂದೂಡಿದರು.
Advertisement