

ಬೆಳಗಾವಿ: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗಾವಿಯ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ಮಹಿಳೆಯರು ಸೇರಿದಂತೆ 12 ಜನರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2023ರ ಡಿಸೆಂಬರ್ 11 ರಂದು ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಜನರ ಗುಂಪೊಂದು ಮಹಿಳೆಯನ್ನು ವಿವಸ್ತ್ರಗೊಳಿಸಿ, ಥಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 12 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್‌ಗೆ ಒಂದೊಂದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಅಪರಾಧಿಗಳಾದ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳು ಬಲವಂತವಾಗಿ ಮಹಿಳೆಯ ಮನೆಗೆ ನುಗ್ಗಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ, ಆಕೆಯ ಮಂಗಳಸೂತ್ರವನ್ನು ಹರಿದು ಬೀದಿಗೆ ಎಸಿದಿದ್ದರು.
ಹೊಸ ವಂಟಮೂರಿ ಗ್ರಾಮದ ಯುವತಿ ಮತ್ತು ಯುವಕ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಹುಡುಗಿಯ ಮನೆಯವರು ಡಿಸೆಂಬರ್ 12, 2023 ರಂದು ಹುಡುಗಿಗೆ ಇನ್ನೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ನಿಗದಿಪಡಿಸಿದ್ದರು. ಇದನ್ನು ತಿಳಿದ ನಂತರ, ಹುಡುಗಿ ತಾನು ಪ್ರೀತಿಸುತ್ತಿದ್ದ ಹುಡುಗನ ಜೊತೆ ಹಿಂದಿನ ರಾತ್ರಿ ಓಡಿಹೋಗಿದ್ದರು.
ಈ ವಿಷಯ ತಿಳಿದ ನಂತರ ಕೋಪಗೊಂಡ ಹುಡುಗಿಯ ಪೋಷಕರು ಹುಡುಗನ ಮನೆಗೆ ತೆರಳಿ ಅವರ ಮನೆಯನ್ನು ಧ್ವಂಸಗೊಳಿಸಿದ್ದರು. ಅಲ್ಲದೆ ಯುವತಿಯ ತಾಯಿಯನ್ನು ಥಳಿಸಿ, ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕುವ ಮೂಲಕ ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದರು.
Advertisement