'ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ.., ಲೇ ಆರೆಸ್ಸೆಸ್ಸು.. ನಿಂಗೆ ಮಾನ ಮರ್ಯಾದೆ ಇದ್ಯಾ..': ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇಗೌಡ; Video
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿ ಇಂದು ವಿಧಾನಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿದ ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಏಕವಚನದಲ್ಲೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.
ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಕೆಂಡಕಾರಿದ ಶಾಸಕ ಕೆ.ಎಂ ಶಿವಲಿಂಗೇಗೌಡ, ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ? ನಾವು ಧರಣಿ ಮಾಡುತ್ತೇವೆ ಆದರೆ ಈ ರೀತಿಯಾಗಿ ಮಾಡಿಲ್ಲ. ನಿಮ್ಮತರ ಕೆಟ್ಟ ಜನರನ್ನ ನಾನು ಎಲ್ಲಿಯೂ ನೋಡಿಲ್ಲ. ಲೇ ಅರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..? ಎಂದು ಜಾಡಿಸಿದರು.
ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶಗೊಂಡ ಶಿವಲಿಂಗೇಗೌಡ ಬಿಜೆಪಿ ಸದಸ್ಯ ಶರಣು ಸಲಗಾರ್ ಸೇರಿದಂತೆ ಇತರರ ವಿರುದ್ಧ ರೊಚ್ಚಿಗೆದ್ದರು. ಇಂತಹ ಕೆಟ್ಟ ವಿಪಕ್ಷ ನಾನು ನೋಡಿಲ್ಲ. ಇವರನ್ನು ಕೂಡಲೇ ಹೊರಗೆ ಹಾಕಿ. ನನ್ನ ವಿರುದ್ಧ ವೈಯಕ್ತಿಕವಾಗಿ ಟಾರ್ಗೆಟ್ ಮಾಡ್ತಿದ್ದಾರೆ. ಇದು ಕೆಟ್ಟ ವರ್ತನೆ ಎಂದರು.
ಕೊಬ್ಬರಿ ಬಗ್ಗೆ ಯಾರು ಹೋರಾಟ ಮಾಡಿದ್ದರು ಎಂದು ಅರಸೀಕೆರೆ ಹೋಗಿ ಕೇಳು ಎಂದು ಶರಣು ಸಲಗಾರ್ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ನಿನಗೆ ಮಾನ ಮರ್ಯಾದೆ ಇದೆಯಾ ಕೋತಿ ಬಡ್ಕೊಂಡಂಗೆ ಬಡ್ಕೋತಿಯಾ. ನೀವು ಕೋತಿ ಆಟ ಆಡೋಕೆ ಹೋಗಬೇಕು. ನಿನ್ನ ಹೆಂಡತಿನ ತಹಶೀಲ್ದಾರ್ ಮಾಡಿ ದುಡ್ಡು ಹೊಡೆದಿದ್ದೀಯಾ. ನಿನಗೆ ಮಾನ ಮರ್ಯಾದೆ ಇದೆಯಾ ಎಂದು ಏಕವಚನದಲ್ಲೇ ಗುಡುಗಿದರು.
ರಾಜ್ಯಪಾಲರು ಕಾನೂನಿಗೆ ತಡೆ ಹಿಡಿದಿದ್ದಾರೆ. ಇಲ್ಲದಿದ್ದರೇ ನಿಮಗೆ ಒಂದ್ ಗತಿ ಕಾಣಿಸುತ್ತಿದ್ದೆ. ರಾಜ್ಯಪಾಲರು ಜಾರಿಗೆ ಕೊಡಬೇಕಿತ್ತು ಎಂದು ಹರಿಹಾಯ್ದರು.
ಕ್ಷಮೆಗೆ ಬಿಜೆಪಿ ಆಗ್ರಹ
ಶಿವಲಿಂಗೇಗೌಡರು ಸದನದಲ್ಲಿ ಏಕವಚನದಲ್ಲಿ ಸದಸ್ಯರ ವಿರುದ್ಧ ಈ ರೀತಿ ಬೈದಿದ್ದು, ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಕ್ಷದ ಸದಸ್ಯರು ಒತ್ತಾಯಿಸಿದರು.

