ದ್ವೇಷ ಭಾಷಣ-ನಕಲಿ ಸುದ್ದಿಗಳಿಗೆ ಕಡಿವಾಣ: AI ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ಮುಂದು, 67.26 ಕೋಟಿ ರೂ. ವೆಚ್ಚದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ..!

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ಮಸೂದೆ–2025ಗೆ ಅನುಮೋದನೆ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದು, ಇದೀಗ ಮಸೂದೆಯು ರಾಷ್ಟ್ರಪತಿ ಅಂಗಳ ತಲುಪಿದೆ. ಹೀಗಾಗಿ ಮಸೂದೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.
Vidhana Soudha
ವಿಧಾನಸೌಧ
Updated on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ, ನಕಲಿ ಸುದ್ದಿ, ತಪ್ಪು ಮಾಹಿತಿಯ ಹರಡುವಿಕೆ ಹಾಗೂ ದುರುದ್ದೇಶಿತಪೂರಿತ ಪ್ರಚಾರಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್’ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟವು ಗುರುವಾರ ನಡೆದ ಸಭೆಯಲ್ಲಿ ರೂ. 67.26 ಕೋಟಿ ವೆಚ್ಚದಲ್ಲಿ AI ತಂತ್ರಜ್ಞಾನ ಆಧಾರಿತ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ಮಸೂದೆ–2025ಗೆ ಅನುಮೋದನೆ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದು, ಇದೀಗ ಮಸೂದೆಯು ರಾಷ್ಟ್ರಪತಿ ಅಂಗಳ ತಲುಪಿದೆ. ಹೀಗಾಗಿ ಮಸೂದೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣದ ಕ್ರಮವಾಗಿ ನೀತಿಗತ ಮಾರ್ಗದ ಮೂಲಕ ದ್ವೇಷ ಭಾಷಣ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಮುಂದಾಗಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ಸುದ್ದಿ ಮತ್ತು ಪ್ರಚಾರ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ, ಸುಳ್ಳು ಸುದ್ದಿ ಮೇಲೆ ಕಣ್ಣಿಡಲು ಎಐ ಆಧಾರಿತ ತಂತ್ರಾಂಶ ವ್ಯವಸ್ಥೆ ಮಾಡಲು ಸಂಪುಟ ನಿರ್ಧಾರ ಮಾಡಿದೆ ಎಂದು ಹೇಳಿದರು.

Vidhana Soudha
ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಪರಮೇಶ್ವರ ಗಂಭೀರ ಆರೋಪ

ಮಾಹಿತಿ ತಂತ್ರಜ್ಞಾನದ ವೇಗ, ವ್ಯಾಪ್ತಿ ಮತ್ತು ಸಂಕೀರ್ಣತೆಯಿಂದಾಗಿ ಸಂಪ್ರದಾಯಿಕ ವಿಧಾನಗಳಿಂದ ನಕಲಿ ಸುದ್ದಿಯನ್ನು ನಿಯಂತ್ರಿಸುವುದು ಕಷ್ಟವಾಗಿದೆ. AI ಆಧಾರಿತ ತಂತ್ರಜ್ಞಾನದಿಂದ ಡಿಜಿಟಲ್ ಅಪಾಯಗಳನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಅವುಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಗ್ರಗಾಮಿಗಳ ನೇಮಕಾತಿ, ಮಕ್ಕಳ ಕಳ್ಳಸಾಗಣೆ, ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು, ಅಪರಾಧಿಕ ಕೃತ್ಯಗಳಿಗೆ ಸಾಮಾಜಿಕ ಜಾಲತಾಣ ಬಳಕೆ, ಆತ್ಮಹತ್ಯೆ ಅಥವಾ ಕೊಲೆಗೆ ಪ್ರಚೋದನೆಯಂಥ ಕೃತ್ಯಗಳನ್ನು ಮಾನಿಟರ್ ಮಾಡಲು ಇದು ನೆರವಾಗಲಿದೆ ಎಂದು

ಸಮಾಜದಲ್ಲಿ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಅಭದ್ರತೆ, ಭಯ ಉಂಟು ಮಾಡುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಐಟಿಬಿಟಿ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ (ಫ್ಯಾಕ್ಸ್ ಚೆಕ್ ಟೀಂ) ರಚಿಸಲಾಗಿದೆ. ಗೃಹ ಇಲಾಖೆಯಲ್ಲಿ ಪ್ರತ್ಯೇಕ ಕೋಶ ರಚಿಸಿ ಸಿಐಡಿ ಘಟಕದಲ್ಲಿ ಇನ್‌ಫಾರ್ಮೇಷನ್ ಡಿಸಾರ್ಡ‌್ರಟ್ಯಾಕಿಂಗ್‌ ಘಟಕಸ್ಥಾಪಿಸಲಾಗಿದೆ. ಆದರೆ, ಮಾಹಿತಿ ತಂತ್ರಜ್ಞಾನದ ಅಗಾಧ ಪ್ರಮಾಣ, ವೇಗ ಮತ್ತು ಸಂಕೀರ್ಣತೆಯಿಂದ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಐ ಚಾಲಿತ ತಂತ್ರಾಂಶದ ಅಗತ್ಯವಿದೆ ಎಂದು ಸಂಪುಟದಲ್ಲಿ ಚರ್ಚಿಸಿದ್ದು, ಇದಕ್ಕಾಗಿ ಪ್ರತ್ಯೇಕ ತಂತ್ರಾಂಶಕ್ಕೆ ಸಂಪುಟ ಅನುಮೋದನೆ ನೀಡಿದೆ.

ಈ ಸಾಫ್ಟ್‌ವೇರ್‌ ನಿಗಾ ಮುಖ್ಯ ವಾಹಿನಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳ ಮೇಲೆ ಇರುವುದಿಲ್ಲ. ಮುಖ್ಯವಾಹಿನಿ ಅಥವಾ ವಾರ್ತಾ ಇಲಾಖೆಯೊಂದಿಗೆ ನೋಂದಣಿ ಆಗಿರುವ ಅಧಿಕೃತ ಮಾಧ್ಯಮ ಸಂಸ್ಥೆಗಳ ಜಾಲತಾಣಗಳ ಮೇಲೆ ನಿಗಾವಹಿಸಲು ಎಐ ಸಾಫ್ಟ್‌ವೇರ್‌ಗೆ ಅವಕಾಶವಿಲ್ಲ ಎಂದುೂ ಸಚಿವರು ಸ್ಪಷ್ಟಪಡಿಸಿದರು.

ಏತನ್ಮಧ್ಯೆ ಎಐ ಆಧಾರಿತ ತಂತ್ರಾಂಶಕ್ಕೆ 3 ವರ್ಷಗಳ ಅವಧಿಗೆ 50 ಕೋಟಿ ರು. ವೆಚ್ಚವಾಗಲಿದ್ದು, ಇತರೆ 14 ಕೋಟಿ ರು. ವೆಚ್ಚ, ಸಿಬ್ಬಂದಿ, ತೆರಿಗೆಗಳು ಸೇರಿ 67.26 ಕೋಟಿ ರು. ವೆಚ್ಚ ಆಗಲಿದೆ ಎಂದು ತಿಳಿದಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com