

ಬೆಂಗಳೂರು: ಬೆಂಗಳೂರಿನ ಕೆಆರ್ ಪುರಂ ಮೆಟ್ರೋ ನಿಲ್ದಾಣದ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ಕಿಲ್ಲರ್ ಬಿಎಂಟಿಸಿ ಬಸ್ಸಿಗೆ ಮಣಿಪುರ ಮೂಲದ ಯುವತಿಯೊಬ್ಬರು ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತ ಯುವತಿಯನ್ನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಣಿಪುರದ ಹನ್ನಾ ಇನಕಾ ಎಂದು ಗುರುತಿಸಲಾಗಿದೆ.
ಯುವತಿ ತನ್ನ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕೆಳಗೆ ಬಿದ್ದಿದೆ. ಹಿಂಬದಿ ಕುಳಿತಿದ್ದ ಹನ್ನಾ ನೇರವಾಗಿ ಬಸ್ಸಿನ ಮುಂಭಾಗದ ಚಕ್ರಕ್ಕೆ ಸಿಲುಕಿದ್ದಾರೆ. ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯೇ ಈ ಸಾವಿಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಪಘಾತದ ನಂತರ ಹನ್ನಾ ಅವರನ್ನು ತಕ್ಷಣವೇ ಕೆ.ಆರ್. ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಆದ ತೀವ್ರ ಪೆಟ್ಟು ಮತ್ತು ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Advertisement