

ಬೆಂಗಳೂರು: ರಾಷ್ಟ್ರೀಯ ದ್ವಿದಳ ಧಾನ್ಯ ಮಿಷನ್ (National Pulses Mission) ಅಡಿಯಲ್ಲಿ ಕರ್ನಾಟಕಕ್ಕೆ 191.67 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಜೊತೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ ಬಾಕಿ ಇರುವ 154 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಅನುಮೋದನಾ ಪತ್ರ ಹಸ್ತಾಂತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಅಡಿ ದ್ವಿದಳ ಧಾನ್ಯ ಮಿಷನ್‌ನಿಂದ್ ರಾಜ್ಯಕ್ಕೆ ರೂ.191.67 ಕೋಟಿ ಅನುದಾನ ನೀಡಿದ್ದು, ಇದನ್ನು ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿ ಬಾಕಿ ಇರುವ ರೂ.154 ಕೋಟಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಭಾರತ ಕೃಷಿ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಶೇಷವಾಗಿ ಬೇಳೆಕಾಳು ಮತ್ತು ಸಿರಿಧಾನ್ಯ ಬೆಳೆಗಳಲ್ಲಿ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ತೊಗರಿಬೇಳೆ ಉತ್ಪಾದನೆ ಹೆಚ್ಚಿಸಲು ರಾಜ್ಯದಲ್ಲಿ 25 ಬೀಜ ಗ್ರಾಮಗಳ (Seed Villages) ಸ್ಥಾಪನೆಗೆ ಘೋಷಣೆ ಮಾಡಿದ್ದು, ಭಾಗವಹಿಸುವ ರೈತರಿಗೆ ಹೆಕ್ಟೇರ್‌ಗೆ ರೂ.10,000 ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಬೇಳೆಕಾಳು ಸಂಸ್ಕರಣೆಗೆ ಉತ್ತೇಜನ ನೀಡಲು ಪ್ರತಿ ದಾಲ್ ಮಿಲ್ಲಿಗೆ ರೂ.25 ಲಕ್ಷ ಕೇಂದ್ರ ಸಹಾಯಧನ ನೀಡಲಾಗುವುದು. ಇದರಿಂದ ಸ್ಥಳೀಯ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರೈತರಿಗೆ ಉತ್ತಮ ಬೆಲೆ ದೊರಕಲು ಸಹಾಯವಾಗಲಿದೆ ಎಂದು ತಿಳಿಸಿದರು.
ರಾಜ್ಯ ಕೃಷಿ ಸಚಿವ ಎನ್. ಚೇಲುವರಾಯಸ್ವಾಮಿ ಮಾತನಾಡಿ, ಭಾರತದ ಸಿರಿಧಾನ್ಯ ರಫ್ತಿನಲ್ಲಿ ಸುಮಾರು ಶೇ. 40 ರಷ್ಟು ಮತ್ತು ಒಟ್ಟು ಕಾಫಿ ರಫ್ತಿನಲ್ಲಿ ಶೇ. 60 ರಷ್ಟು ಪಾಲು ಈ ರಾಜ್ಯದ್ದಾಗಿದೆ ಎಂದು ಹೇಳಿದರು.
ಮುಂದಿನ ಬೆಳವಣಿಗೆಗಾಗಿ ಫುಡ್ ಪಾರ್ಕ್, ಕೋಲ್ಡ್ ಸ್ಟೋರೇಜ್, ಲಾಜಿಸ್ಟಿಕ್ಸ್, ಬ್ರ್ಯಾಂಡಿಂಗ್ ಮತ್ತು ರಫ್ತು ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಬೆಂಬಲದ ಅಗತ್ಯವಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಚೌಹಾಣ್ ಅವರು, ಗುಣಮಟ್ಟದ ಬೀಜಗಳು, ಸಂಸ್ಕರಣಾ ಮೂಲಸೌಕರ್ಯ ಮತ್ತು ಪರಿಣಾಮಕಾರಿ ಮಾರುಕಟ್ಟೆ ಸಂಪರ್ಕಗಳು ರೈತರ ಆದಾಯ ಸ್ಥಿರತೆಗೆ ಅತ್ಯಗತ್ಯ ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಭೇದಭಾವವಿಲ್ಲದೆ ರಾಜ್ಯಗಳಿಗೆ ಕೇಂದ್ರ ನೆರವು ನೀಡಲಾಗುವುದು ಎಂದು ಪುನರುಚ್ಚರಿಸಿದ ಅವರು, ಆಹಾರ ಭದ್ರತೆ ಮತ್ತು ಕೃಷಿ ಬೆಳವಣಿಗೆಗಾಗಿ ಕೇಂದ್ರ–ರಾಜ್ಯ ಸಹಕಾರ ಅಗತ್ಯ ಎಂದು ಹೇಳಿದರು.
Advertisement