Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿತಾಯಕ್ಕೆ ಸರ್ಕಾರ ಮುಂದು; ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತ?

2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದೇ ವರ್ಷ ಪೂರಕ ಬಜೆಟ್‌ನಲ್ಲಿ ಎಂಟು ತಿಂಗಳಿಗೆ ರೂ.35,410 ಕೋಟಿ ಅನುದಾನ ಮೀಸಲಿಡಲಾಗಿತ್ತು.
guarantee Scheme karnataka
ಗ್ಯಾರಂಟಿ ಯೋಜನೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಯ ನಡುವೆಯೇ, ಅರ್ಹವಲ್ಲದ ಫಲಾನುಭವಿಗಳನ್ನು ಕೈಬಿಡುವ ಮೂಲಕ ಯೋಜನೆಗಳ ವೆಚ್ಚ ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದೇ ವರ್ಷ ಪೂರಕ ಬಜೆಟ್‌ನಲ್ಲಿ ಎಂಟು ತಿಂಗಳಿಗೆ ರೂ.35,410 ಕೋಟಿ ಅನುದಾನ ಮೀಸಲಿಡಲಾಗಿತ್ತು.

2024–25ರಲ್ಲಿ ರೂ.56,000 ಕೋಟಿ ಹಾಗೂ ಪ್ರಸ್ತುತ 2025–26 ಆರ್ಥಿಕ ವರ್ಷದಲ್ಲಿ ಸುಮಾರು ರೂ.51,000 ಕೋಟಿ ಅನುದಾನ ನೀಡಲಾಗಿದೆ. ಇದೀಗ ಅರ್ಹತೆಯಿಲ್ಲದ ಫಲಾನುಭವಿಗಳನ್ನು ಯೋಜನೆಗಳಿಂದ ತೆಗೆದುಹಾಕುತ್ತಿರುವುದರಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಶಕ್ತಿ ಯೋಜನೆಯಡಿ ಪ್ರತಿದಿನ 70–75 ಲಕ್ಷ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಆದರೆ ನಕಲಿ ದಾಖಲೆಗಳ ಬಳಕೆ ಹಾಗೂ ಕೆಲ ಕಡೆ ಪುರುಷರಿಗೆ ಉಚಿತ ಟಿಕೆಟ್ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ 4.21 ಕೋಟಿ ಜನರಿಗೆ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ. ಆದರೆ, ಯೋಜನೆಯಡಿ ಸುಮಾರು ಶೇ.20 ಫಲಾನುಭವಿಗಳು ಅರ್ಹವಲ್ಲ ಎಂದು ಪತ್ತೆಯಾಗಿದ್ದು, ಸುಮಾರು 4 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇನ್ನು 5 ಕೆಜಿ ಅಕ್ಕಿ ಬದಲು ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಎಣ್ಣೆ ನೀಡುವ ವ್ಯವಸ್ಥೆ ಜಾರಿಗೊಳಿಸಿ ವೆಚ್ಚ ಕಡಿತಗೊಳಿಸಲಾಗಿದೆ.

guarantee Scheme karnataka
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ: ನಾಯಕತ್ವ ಬದಲಾವಣೆ, ಗ್ಯಾರಂಟಿ ಯೋಜನೆ, ಹಗರಣಗಳಿಂದಲೇ ಸುದ್ದಿ!

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ರೂ.2,000 ನೀಡಲಾಗುತ್ತಿದೆ. ಆದರೆ, ಪರಿಶೀಲನೆ ವೇಳೆ ಕೆಲವರು ಆದಾಯ ತೆರಿಗೆ ಪಾವತಿಸುವವರು ಹಾಗೂ ಮೃತ ಫಲಾನುಭವಿಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಇದು ನಿಯಮಗಳಿಗೆ ವಿರುದ್ಧವಾಗಿದೆ.

ಅಲ್ಲದೆ, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಮರಣ ಹೊಂದಿದ್ದರೂ. ಅವರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈಗ ಪಿಂಚಣಿಯಂತೆಯೇ ಜೀವ ಪ್ರಮಾಣಪತ್ರಗಳನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಯುವ ನಿಧಿ ಯೋಜನೆಯಡಿ ಪದವಿ ನಂತರ ಎರಡು ವರ್ಷಗಳವರೆಗೆ ಮಾತ್ರ ನೆರವು ನೀಡಬೇಕಾದರೂ, ಕೆಲವರು ಹೆಚ್ಚು ಕಾಲ ಹಣ ಪಡೆಯುತ್ತಿರುವುದು ಕಂಡುಬಂದಿದೆ. ಇನ್ನು ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯಲ್ಲಿಯೂ ಅಕ್ರಮಗಳ ಬಗ್ಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ನಿಗದಿಪಡಿಸಿದ ಮೊತ್ತವನ್ನು ಕಡಿಮೆ ಮಾಡಲು ಹಲವಾರು ಸಲಹೆಗಳಿವೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವು ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲಾಗಿದ್ದರೂ, ಕೆಲವರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಒಂದೆರಡು ಸುತ್ತಿನ ಚರ್ಚೆಯ ನಂತರ ನಮಗೆ ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com