ರಾಜ್ಯ ಬಜೆಟ್ ಗೆ ಮುನ್ನ 21 ಶಾಸಕರು ವಿದೇಶ ಪ್ರವಾಸ: ಸಿದ್ದರಾಮಯ್ಯ ಬಣದ ಈ ನಾಯಕರು ಏನೆಂದರು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ದಾಖಲೆ 17ನೇ ಬಜೆಟ್ ನ್ನು ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಅಧಿವೇಶನ ಮಾರ್ಚ್ 27ರವರೆಗೆ ನಡೆಯಲಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯ ಬಜೆಟ್‌ಗೂ ಮುನ್ನ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗಿನ ಅಧಿಕಾರ ಪೈಪೋಟಿ ಮುಂದುವರಿದಿರುವ ಸಂದರ್ಭದಲ್ಲೇ, 21 ಮಂದಿ ಕಾಂಗ್ರೆಸ್ ಶಾಸಕರು ನಿನ್ನೆ ಬುಧವಾರ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ದಾಖಲೆ 17ನೇ ಬಜೆಟ್ ನ್ನು ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಅಧಿವೇಶನ ಮಾರ್ಚ್ 27ರವರೆಗೆ ನಡೆಯಲಿದೆ.

ವಿದೇಶಕ್ಕೆ ತೆರಳಿರುವ ಶಾಸಕರು ಮುಖ್ಯಮಂತ್ರಿಯವರ ಆಪ್ತರಾಗಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, 11 ಶಾಸಕರು ಮಂಗಳವಾರವೇ ಹೊರಟಿದ್ದು, ಉಳಿದ 10 ಮಂದಿ ತಮ್ಮ ಕುಟುಂಬಗಳೊಂದಿಗೆ ವಿವಿಧ ವಿದೇಶಿ ಸ್ಥಳಗಳಿಗೆ ತೆರಳಲು ಯೋಜಿಸಿದ್ದಾರೆ.

CM Siddaramaiah
ಅಧಿಕಾರ ಹಸ್ತಾಂತರ ಜಟಾಪಟಿ ಮಧ್ಯ ಸಿದ್ದರಾಮಯ್ಯ ಬಣದ 11 ಮಂದಿ 'ಕೈ' ಶಾಸಕರು ವಿದೇಶಕ್ಕೆ ಪ್ರಯಾಣ!

ವಿದೇಶ ಪ್ರವಾಸಕ್ಕೆ ತೆರಳಿರುವವರಲ್ಲಿ ಸಿ. ಪುಟ್ಟರಂಗ ಶೆಟ್ಟಿ, ಬಿ. ದೇವೇಂದ್ರಪ್ಪ, ಎಚ್. ಡಿ. ತಮ್ಮಯ್ಯ, ಹಂಪನಗೌಡ ಬದಾರ್ಲಿ, ಬಿ. ಎಂ. ನಾಗರಾಜ್, ಎ. ವಸಂತ್ ಕುಮಾರ್, ಡಿ. ತಿಮ್ಮಯ್ಯ ಮತ್ತು ಶರಣಗೌಡ ಪಾಟೀಲ ಬೈಯಾಪುರ ಸೇರಿದಂತೆ ಹಲವರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಮೊದಲು ಮಲೇಶಿಯಾದ ಕೌಲಾಲಂಪುರಕ್ಕೆ ತೆರಳಿ, ಅಲ್ಲಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಪ್ರಯಾಣ ಮುಂದುವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರವಾಸವು ವೈಯಕ್ತಿಕವಾಗಿದ್ದು, ಪಕ್ಷ ಅಥವಾ ಸರ್ಕಾರದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಇದು ಖಾಸಗಿ ಪ್ರವಾಸ. ನಾನು ಮತ್ತು ನನ್ನ ಕುಟುಂಬ ಮಾತ್ರ ಹೋಗುತ್ತಿದ್ದೇವೆ ಎಂದು ತಮ್ಮಯ್ಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

CM Siddaramaiah
'ನಾಯಕತ್ವ ಬದಲಾವಣೆ ವಿಚಾರವಾಗಿ ಸಮಯ ಬಂದಾಗ ಸಿದ್ದರಾಮಯ್ಯನವರೇ ಮಾತನಾಡುತ್ತಾರೆ': ಡಿ.ಕೆ ಶಿವಕುಮಾರ್

ಚಿಕ್ಕಮಗಳೂರು ಶಾಸಕ ತಮ್ಮಯ್ಯ ಅವರು, ಈ ನಿರ್ಧಾರವನ್ನು ಬೆಳಗಾವಿ ವಿಧಾನಮಂಡಲ ಅಧಿವೇಶನದ ವೇಳೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪ್ರವಾಸದಲ್ಲಿ ಆಸಕ್ತಿ ಹೊಂದಿರುವವರು ಮಾತ್ರ ಹೋಗುತ್ತಿದ್ದಾರೆ. ನಾವು ಆಗಾಗ ವಿದೇಶಕ್ಕೆ ಹೋಗುತ್ತೇವೆ, ಆದರೆ ಇದು ಮೊದಲ ಬಾರಿಗೆ ಸುದ್ದಿಯಾಗಿದೆ ಎಂದು ಹೇಳಿದರು.

ಬದಾರ್ಲಿ ಅವರು, ಈ ಪ್ರವಾಸದ ವೆಚ್ಚವನ್ನು ಶಾಸಕರು ತಮ್ಮದೇ ಹಣದಿಂದ ಭರಿಸುತ್ತಿದ್ದು, ಇದಕ್ಕೆ ರಾಜಕೀಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾವು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ವಿದೇಶಕ್ಕೆ ಹೋಗುತ್ತೇವೆ. ಹಿಂದೆ ಮಸ್ಕಟ್, ಯುರೋಪಿನ ದೇಶಗಳು ಮತ್ತು ಅಮೆರಿಕಕ್ಕೂ ಭೇಟಿ ನೀಡಿದ್ದೇವೆ ಎಂದು ಹೇಳಿದರು.

ಪುಟ್ಟರಂಗ ಶೆಟ್ಟಿ ಅವರು, ಶಾಸಕರು ಮಾರ್ಚ್ 2 ಅಥವಾ 3ರಂದು ಮರಳುವರು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಯವರ ಆಪ್ತರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರವಾಸದ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ಇಲ್ಲ. ಅವರ ಹೆಸರನ್ನು ಅನಗತ್ಯವಾಗಿ ಎಳೆಯುವುದು ಯಾಕೆ ಎಂದು ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರೆಂದು ಪರಿಗಣಿಸಲ್ಪಡುವ ಶಾಸಕರು, ಸ್ನೇಹಿತರು ಒಟ್ಟಿಗೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ ಎಂದರು. ನಾವು ಕೂಡ ವಿದೇಶಕ್ಕೆ ಹೋಗಿದ್ದೇವೆ. ಅದರಲ್ಲಿ ತಪ್ಪೇನು ನನಗೆ ಆಹ್ವಾನ ಬಂದಿರಲಿಲ್ಲ. ನಮ್ಮ ತಂಡ ಬೇರೆ, ಅವರ ತಂಡ ಬೇರೆ, ಆದರೆ ಇದು ಗುಂಪುಗಾರಿಕೆ ಅಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಶಾಸಕ ರವಿ ಗಣಿಗ ಅವರು, ವಿದೇಶ ಪ್ರವಾಸದ ಕಾರಣದಿಂದ ಯಾರನ್ನೂ ಸ್ಥಾನದಿಂದ ತೆಗೆದುಹಾಕಲು ಅಥವಾ ಸರ್ಕಾರದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿ, ಕಾಂಗ್ರೆಸ್ ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com