'ನಾಯಕತ್ವ ಬದಲಾವಣೆ ವಿಚಾರವಾಗಿ ಸಮಯ ಬಂದಾಗ ಸಿದ್ದರಾಮಯ್ಯನವರೇ ಮಾತನಾಡುತ್ತಾರೆ': ಡಿ ಕೆ ಶಿವಕುಮಾರ್

ನಾಯಕತ್ವ ವಿಚಾರದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ, ಈ ತೀರ್ಮಾನ ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವೇನಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
Siddaramaiah, D K Shivakumar
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್
Updated on

ಬೆಂಗಳೂರು: ‘ನಾಯಕತ್ವ ವಿಚಾರವಾಗಿ ಸಿದ್ದರಾಮಯ್ಯ-ನನ್ನ ನಡುವೆ ಕದ್ದುಮುಚ್ಚಿ ಗುಟ್ಟಿನ ವ್ಯವಹಾರ ನಡೆದಿಲ್ಲ. ಸಮಯ ಬಂದಾಗ ಸಿದ್ದರಾಮಯ್ಯ ಅವರೇ ನಮ್ಮ ತೀರ್ಮಾನದ ಬಗ್ಗೆ ಜನರಿಗೆ ಸಂದೇಶ ನೀಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಾಯಕತ್ವ ವಿಚಾರದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ, ಈ ತೀರ್ಮಾನ ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವೇನಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

‘ಬಾಲವು ನಾಯಿಯನ್ನು ಅಲ್ಲಾಡಿಸಲು ಸಾಧ್ಯವೆ? ಅದೇ ರೀತಿ ನಾಯಕತ್ವ ಬದಲಾವಣೆ ಕೇಳುವ ಶಾಸಕರು ಹೈಕಮಾಂಡನ್ನು ಅಲ್ಲಾಡಿಸಲು ಸಾಧ್ಯವೆ?’ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಯಕರ ಹೇಳಿಕೆ ಕುರಿತು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ ಕ್ರಮ ಕೈಗೊಳ್ಳುತ್ತಾರೆ.

Siddaramaiah, D K Shivakumar
ಬಾಲವೇ ನಾಯಿಯ ಅಲ್ಲಾಡಿಸಲು ಸಾಧ್ಯವಿಲ್ಲ: ನಾಯಕತ್ವ ಚರ್ಚೆಯನ್ನು ನಾಯಿಗೆ ಹೋಲಿಸಿದ ಸಚಿವ ಮಹದೇವಪ್ಪ

ಮಹದೇವಪ್ಪ ಹಾಗೂ ಬೇರೆಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಂಡಿದ್ದೇವೆ. ಆ ತೀರ್ಮಾನ ಏನೆಂಬುದು ಸಮಯ ಬಂದಾಗ ತಿಳಿಯುತ್ತದೆ. ಅದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯಕ್ಕೆ ಸಂದೇಶ ನೀಡುತ್ತಾರೆ’ ಎಂದು ಹೇಳಿದರು.

ಶಾಸಕರ ಪ್ರವಾಸ ಗೊತ್ತಿಲ್ಲ

ಶಾಸಕರ ವಿದೇಶ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನನಗೆ ಯಾವ ಪ್ರವಾಸದ ಬಗ್ಗೆಯೂ ಮಾಹಿತಿಯಿಲ್ಲ. ಈ ಬಗ್ಗೆ ಮಾಧ್ಯಮಗಳಿಂದಷ್ಟೇ ತಿಳಿದಿದ್ದೇನೆ. ಅದು ಅವರ ವೈಯಕ್ತಿಕ ಪ್ರವಾಸವೋ, ಬೇರೆಯವರು ಅವರನ್ನು ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಿಂದ ಆರ್‌ಎಸ್‌ಎಸ್‌ ಕಚೇರಿಗೆ ಭೂಮಿ

ಕಾಂಗ್ರೆಸ್‌ ಭವನಗಳಿಗೆ ಸರ್ಕಾರಿ ಭೂಮಿ ಬಳಸಿಕೊಳ್ಳುತ್ತಿರುವ ಕುರಿತು ಬಿಜೆಪಿ ನಾಯಕರ ಆರೋಪದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್‌, ನಾವು ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಭೂಮಿ ಬಳಸಿಕೊಳ್ಳುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕತೆ ವಹಿಸಿದ ಶತಮಾನೋತ್ಸವ ಹಿನ್ನೆಲೆಯಲ್ಲಿ 100 ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಾವು 5-10 ಸಾವಿರ ಚದರ ಅಡಿಗಳಷ್ಟು ಜಾಗ ಮಂಜೂರು ಮಾಡುತ್ತಿದ್ದೇವೆ.

ಆದರೆ, ಬಿಜೆಪಿ ಆಡಳಿತದಲ್ಲಿದ್ದಾಗ ಬೆಂಗಳೂರು ನಗರದಲ್ಲಿ 100ಕ್ಕೂ ಹೆಚ್ಚಿನ ಕಡೆ ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ಜಾಗ ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ರೂಪಾಯಿಗೆ ಬೆಲೆಬಾಳುತ್ತದೆ. ಆದರೆ, ಬಿಜೆಪಿಯವರು ಪ್ರತಿ ಎಕರೆಗೆ 50 ಲಕ್ಷ ರೂಪಾಯಿಗೆ 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಸಿಎಸ್‌ಆರ್‌ ನಿಧಿ ಮೂಲಕ ಕೋಟ್ಯಂತರ ರು. ಸಂಗ್ರಹಿಸಿದ್ದಾರೆ. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದು ಹೇಳಿದರು.

Siddaramaiah, D K Shivakumar
ಮಗನಿಗೆ ಸಿದ್ದರಾಮಯ್ಯ ಮೂಗುದಾರ: ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲ್ಲ ಎಂದ MLC ಯತೀಂದ್ರ!

ಬಿಜೆಪಿ ಜಾಗ ಮಂಜೂರು ಮಾಡದೆ ಆರ್‌ಎಸ್‌ಎಸ್‌ ಕಚೇರಿ ಹೇಗೆ ನಿರ್ಮಾಣವಾಯಿತು? ಸದಾಶಿವನಗರದಲ್ಲಿ ನಮ್ಮ ಮನೆ ಪಕ್ಕದಲ್ಲಿರುವ ಉದ್ಯಾನವನ್ನು ವೆಲ್‌ನೆಸ್‌ ಸೆಂಟರ್‌ನ ಯೋಗಾ ಕಚೇರಿಗೆ ನೀಡಿದ್ದಾರೆ. ಇಂಥ ನೂರಾರು ಉದಾಹರಣೆ ನೀಡಬಲ್ಲೆ. ಅವರು ನಮಗೆ ಬೋದನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪ ಮಾಡಿಕೊಳ್ಳಲಿ, ನಾವು ನಮ್ಮ ಪಕ್ಷದ ದೇವಾಲಯ ಕಟ್ಟಲು ತೀರ್ಮಾನ ಮಾಡಿದ್ದೇವೆ. ಇದು ನಮ್ಮ ಕರ್ತವ್ಯ. ನಾನು ಅದನ್ನು ಮಾಡಿಯೇ ಮಾಡುತ್ತೇನೆ. ಎಲ್ಲ ಮಾನದಂಡ, ಅರ್ಹತೆ ಆಧಾರದ ಮೇಲೆ ನಾವು ಜಾಗ ಮಂಜೂರು ಮಾಡುತ್ತಿದ್ದೇವೆ. ಈ ಬಗ್ಗೆ ಯಾರು ಬೇಕಾದರೂ ನ್ಯಾಯಾಲಯಕ್ಕೆ ಹೋಗಲಿ ಎಂದರು.

Siddaramaiah, D K Shivakumar
ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಮಹಾದೇವಪ್ಪಗೆ ಡಿ.ಕೆ ಸುರೇಶ್ ತಿರುಗೇಟು!

ವಿದೇಶ ಪ್ರವಾಸ: ಹಿಂದೆ ಸರಿದ ಸಚಿವ ವೆಂಕಟೇಶ್

ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು, ಇತರ ಕಾಂಗ್ರೆಸ್ ಶಾಸಕರೊಂದಿಗೆ ವಿದೇಶಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸಿದ್ಧರಾಮಯ್ಯ ಅವರಿಗೆ ನಿಷ್ಠೆಯುಳ್ಳವರಾಗಿರುವ 20ಕ್ಕೂ ಹೆಚ್ಚು ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಪ್ರವಾಸಕ್ಕೆ ಇಂದು ತೆರಳಿದ್ದಾರೆ.

“ಆರಂಭದಲ್ಲಿ ನನಗೆ ಆಹ್ವಾನ ಬಂದಿತ್ತು. ಸಾಧ್ಯವಾದರೆ ಬರುತ್ತೇನೆ ಎಂದು ಹೇಳಿದ್ದೆ. ಈಗ ನಾನು ಹೋಗುವುದಿಲ್ಲ. ಇತರರು ತಮ್ಮದೇ ಖರ್ಚಿನಲ್ಲಿ ಹೋಗುತ್ತಿದ್ದಾರೆ,” ಎಂದು ವೆಂಕಟೇಶ್ ಹೇಳಿದರು.

ಶಾಸಕರ ಈ ಪ್ರವಾಸಕ್ಕೂ ಸಿದ್ಧರಾಮಯ್ಯ ಮತ್ತು ಶಿವಕುಮಾರ್ ಅವರ ನಡುವಿನ ನಾಯಕತ್ವದ ಪೈಪೋಟಿಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ವೆಂಕಟೇಶ್ ಸ್ಪಷ್ಟಪಡಿಸಿದರು.

ಇದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರು, ಈ ಪ್ರವಾಸದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ಅವರು ಸ್ವತಃ ಹೋಗುತ್ತಿದ್ದಾರೆಯೇ? ಯಾರಾದರೂ ಪ್ರಾಯೋಜಿಸುತ್ತಿದ್ದಾರೆಯೇ? ಪಕ್ಷದ ಅಧ್ಯಕ್ಷನಾಗಿ ನನಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದರು.

ವಿದೇಶ ಪ್ರವಾಸ ಬಗ್ಗೆ ಮಾತನಾಡಿದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ವರ್ಷವೂ ಶಾಸಕರು ಪ್ರವಾಸಕ್ಕೆ ತೆರಳಿದ್ದರು ಎಂದು ಹೇಳಿದರು. “ಖಾಸಗಿ ಪ್ರವಾಸಕ್ಕೆ ಅವರಿಗೆ ಅನುಮತಿ ಬೇಕೇ?” ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com