
ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಗುರುವಾರ ರಾತ್ರಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಮುಸ್ಲಿಂ ಯುವಕರು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಲಾಗಿದೆ ಎಂದು ಹಿಂದೂ ಸಂಘಟನೆಗಳ ನಾಯಕರು ದೂರಿದ್ದಾರೆ. ಕಲ್ಲು ತೂರಿದ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಎಸ್ ಪಿ ಸಿದ್ಧಾರ್ಥ್ ಗೋಯೆಲ್ ತಿಳಿಸಿದ್ದಾರೆ. ಫೆಬ್ರವರಿ 24ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದ್ದು, ತರಕಾರಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು ಸಿಸಿಟಿವಿ ದೃಶ್ಯಾಧಾರಗಳ ಮೇಲೆ ಇನ್ನಷ್ಟು ಜನರನ್ನು ಬಂಧಿಸಲಾಗುವುದು ಎಂದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶುಕ್ರವಾರ ಹಿಂದೂ ಕಾರ್ಯಕರ್ತರು ಬೀದಿಗಿಳಿದು ಮಾಂಸದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಶಾಂತಿ ಮತ್ತು ಸೌಹಾರ್ದ ಕಾಪಾಡಿಕೊಳ್ಳುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟದ ಘಟನೆ ದುರದೃಷ್ಟಕರವಾದದ್ದು ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು, ಚಪ್ಪಲಿ ತೂರಾಟದ ಪುಂಡಾಟಿಕೆ ನಡೆದಿರುವುದು ಅತ್ಯಂತ ಖಂಡನೀಯ ಹಾಗೂ ಹೇಯ ಕೃತ್ಯ. ಈ ಓಲೈಕೆ ದುರಾಡಳಿತದ, ತುಘಲಕ್ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಶಾಂತಿ ಕದಡುವ ಕಿಡಿಗೇಡಿಗಳಿಗೆ ರಾಜಾಶ್ರಯ ಸಿಕ್ಕಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಕೋಟ್ಯಾಂತರ ರೂಪಾಯಿ ಲಂಚ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ವಿರುದ್ಧ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಸ್ನೇಹಮಹಿ ಕೃಷ್ಣರನ್ನು ಬಂಧಿಸಿದ್ದಾರೆ. ಮೂಡಾ ಮಾಜಿ ಆಯುಕ್ತ ಡಿಬಿ ನಟೇಶ್ ಬಡ್ತಿ ಪಡೆಯಲು ಶಾಲಿನಿ ರಜನೀಶ್ ಗೆ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿಕೃಷ್ಣ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ನಕಲಿ ಆಡಿಯೋ ಸೃಷ್ಟಿಸಿ ಜಾಲತಾಣದಲ್ಲಿ ಹಾಕಿ ಅಪಪ್ರಚಾರ ಮಾಡಿದ್ದಾರೆಂದು ಆರೋಪಿಸಿ ನಟೇಶ್ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ನ್ಯಾಯಾಲಯದಲ್ಲಿ ಸರ್ಚ್ ವಾರಂಟ್ ಪಡೆದು, ಸ್ನೇಹಮಯಿ ಕೃಷ್ಣ ಅವರ ಮೈಸೂರು ನಿವಾಸದ ಮೇಲೆ ಬೆಂಗಳೂರು ಸಿಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಕರ್ನಾಟಕ ಹೆಮ್ಮೆಯ ನಂದಿನಿ ಉತ್ಪನ್ನಗಳು ವಿಷಕಾರಿ, ಕಾಯಿಲೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಮತ್ತು ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಎಂದು ಹೇಳುವ ರೀಲ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ವಿರುದ್ಧ ಕೆಎಂಎಫ್ ಪೊಲೀಸ್ ದೂರು ದಾಖಲಿಸಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಮಾನನಷ್ಟಕರ ಎಂದು ಹೇಳಿರುವ ಕೆಎಂಎಫ್, FSSAI ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಅಲ್ಲದೆ ನಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಹೇಳಿದೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಚರ್ಮರೋಗ ತಜ್ಞೆ ಡಾ. ಶರಣ್ಯಾ ಸಂತೋಷ್ ಪದ್ಮಾ, ಮಲ್ಲೇಶ್ವರ ಠಾಣೆ ಪೊಲೀಸರಿಂದ ನನಗೆ ಫೋನ್ ಕರೆ ಬಂದಿತ್ತು. ಆದರೆ ನನ್ನ ವಿರುದ್ಧ FIR ಆಗಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಪೊಲೀಸರು ಕೇಳಿದ್ದಾರೆ ಎಂದರು.
ಮಾನವ-ಹುಲಿ ಸಂಘರ್ಷದ ಕಾರಣದಿಂದಾಗಿ ಕಳೆದ ವರ್ಷ ನ.7ರಂದು ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಲಾಗಿದೆ. ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು. ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಈಗ ಬಳಸಬೇಕು. ಹೆಚ್ಚಾಗಿ ಬಸ್‌ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ. ಸಫಾರಿ ಸೇವೆ ಪುನರಾರಂಭಿಸುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ಧಾರಕ್ಕೆ ಮೈಸೂರು ಮತ್ತು ಚಾಮರಾಜನಗರ ರೈತರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಫಾರಿ ಪುನರಾರಂಭದಿಂದ ಮಾನವ–ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Advertisement