

ಬೆಂಗಳೂರು: ಹೊಸದಾಗಿ ಕಡ್ಡಾಯಗೊಳಿಸಲಾದ ಬಸ್ ಸುರಕ್ಷತಾ ನಿಯಮಗಳನ್ನು ಪಾಲಿಸಲು ಫೆಬ್ರವರಿ 28 ರವರೆಗೆ ಸರ್ಕಾರ ಗಡುವು ನೀಡಿದ್ದರೂ, ಅಧಿಕಾರಿಗಳು ಈಗಲೇ ದಂಡ ವಿಧಿಸಿ ಕಿರುಕುಳ ನೀಡುತ್ತಿದ್ದಾರೆಂದು ಕರ್ನಾಟಕದ ಖಾಸಗಿ ಬಸ್ ನಿರ್ವಾಹಕರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಸರ್ಕಾರದ ನಿರ್ದೇಶನಗಳ ಬಹುತೇಕ ಅಂಶಗಳನ್ನು ಈಗಾಗಲೇ ಪಾಲಿಸಲಾಗಿದೆ. ಅಗ್ನಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ (FDSS) ಅಳವಡಿಕೆ ಮತ್ತು ಮೇಲ್ಛಾವಣಿಯ ಸರಕು ಸಾಗಣೆ ಕ್ಯಾರಿಯರ್ ನವೀಕರಣ ಮಾತ್ರ ಬಾಕಿಯಿದ್ದು, ಈ ಕಾರ್ಯಕ್ಕೆ ಫೆ.28ರವರೆಗೆ ಸಮಯ ನೀಡಲಾಗಿದೆ. ಆದರೆ, ಗಡುವು ಮುಗಿಯುವ ಮುನ್ನವೇ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ತಡೆದು ದಂಡ ವಸೂಲಿ ಮಾಡುತ್ತಿರುವುದು ಕಿರುಕುಳ ನೀಡಿದಂತಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ನೂತನ ಸುರಕ್ಷತಾ ನಿಯಮಗಳಲ್ಲಿರುವ ಕೆಲವು ಅಂಶಗಳ ಕುರಿತಂತೆ ಖಾಸಗಿ ಬಸ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪಾರ್ಟಿಷನ್ ಬಾಗಿಲುಗಳನ್ನು ತೆಗೆದುಹಾಕುವ ಕ್ರಮವನ್ನು “ಅವೈಜ್ಞಾನಿಕ” ಎಂದು ನಟರಾಜ್ ಶರ್ಮಾ ಟೀಕಿಸಿದ್ದು, ಇದರಿಂದ ಶಬ್ದ ಹೆಚ್ಚುವುದು ಹಾಗೂ ಏರ್ ಕಂಡಿಷನಿಂಗ್ ಪರಿಣಾಮಕಾರಿತ್ವ ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ತುರ್ತು ನಿರ್ಗಮನ ದ್ವಾರಗಳ ಸ್ಥಳ ನಿರ್ಧಾರ ಕೂಡ ವೈಜ್ಞಾನಿಕವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವ ಮುನ್ನ ತಾಂತ್ರಿಕ ತಜ್ಞರು, ವಾಹನ ತಯಾರಕರು, ಬಿಲ್ಡರ್‌ಗಳು ಹಾಗೂ ಬಸ್ ಮಾಲೀಕರ ಸಂಘಟನೆಗಳನ್ನು ಒಳಗೊಂಡ ಸಂಶೋಧನಾ ಸಮಿತಿಯನ್ನು ರಚಿಸಬೇಕಿತ್ತು. ತಾಂತ್ರಿಕ ಸಲಹೆಗಳ ಆಧಾರದಲ್ಲಿ ನಿಯಮ ರೂಪಿಸಬೇಕಿತ್ತು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಹೊಸ ಸುರಕ್ಷತಾ ನಿಯಮಗಳು ಕಡ್ಡಾಯವಾಗಿದ್ದು, ಪಾಲನೆ ಮಾಡದ ವಾಹನಗಳ ವಿರುದ್ಧ ಪರವಾನಗಿ ಸ್ಥಗಿತ ಅಥವಾ ರದ್ದುಪಡಿಸುವ ಕ್ರಮವೂ ಕೈಗೊಳ್ಳಬಹುದು. ಎಂದು ತಿಳಿಸಿದ್ದಾರೆ.
ಇದೇ ವೇಳೆ ಪರಿಶೀಲನೆ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಸಂಚಾಲಕರು ಅದನ್ನು ಕಿರುಕುಳವೆಂದು ಭಾವಿಸುತ್ತಿದ್ದಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ಇಲಾಖೆಯ 11 ಸುರಕ್ಷತಾ ನಿರ್ದೇಶನಗಳಲ್ಲಿ, 12 ಮೀಟರ್ ಉದ್ದದವರೆಗೆ ಇರುವ ಬಸ್‌ಗಳಿಗೆ ಕನಿಷ್ಠ ನಾಲ್ಕು ತುರ್ತು ನಿರ್ಗಮನ ದ್ವಾರಗಳು ಕಡ್ಡಾಯವಾಗಿದ್ದು, ಅದಕ್ಕಿಂತ ಉದ್ದದ ಬಸ್‌ಗಳಿಗೆ ಐದು ದ್ವಾರಗಳು ಇರಬೇಕು ಎಂದು AIS:119 ಮಾನದಂಡದಲ್ಲಿ ತಿಳಿಸಲಾಗಿದೆ.
ಮೇಲ್ಛಾವಣಿಯ ಸರಕು ಸಾಗಣೆ ಕ್ಯಾರಿಯರ್ ಹಾಗೂ ಮೆಟ್ಟಿಲುಗಳನ್ನು ತೆಗೆದುಹಾಕಬೇಕು ಮತ್ತು ಅನಧಿಕೃತ ಚ್ಯಾಸಿಸ್ ವಿಸ್ತರಣೆ ಮೂಲಕ ನಿರ್ಮಿಸಲಾದ ಬಸ್‌ಗಳನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ ಎಂದು ಸೂಚಿಸಲಾಗಿದೆ.
Advertisement