

ಬೆಂಗಳೂರು: ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿದ್ದು, ಭಾರತದ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರವನ್ನು ಮುನ್ನಡೆಸುತ್ತಿರುವ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಆಹ್ವಾನ ನೀಡಿಲ್ಲ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಹಿತಾಸಕ್ತಿಗಾಗಿ ಪಕ್ಷ ರಾಜಕಾರಣ ಮೀರಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಿಗೆ ಕರ್ನಾಟಕ ಸಹಕಾರ ನೀಡಿದೆ. ಆದರೆ, ಎಐ ಶೃಂಗಸಭೆಗಳಂತಹ ರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳ ಐಟಿ ಸಚಿವರನ್ನು ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.
ಮಾಜಿ ಇನ್ಫೋಸಿಸ್ ಸಿಎಫ್‌ಒ ಮೋಹನ್‌ದಾಸ್ ಪೈ ಅವರ ಟೀಕೆಗೆ ಪ್ರತಿಕ್ರಿಯಿಸಿ, “ಕರ್ನಾಟಕದ ಅನೇಕ ಎಐ ಉದ್ಯಮಿಗಳು ಶೃಂಗಸಭೆಯವ್ವಿ ಭಾಗವಹಿಸಿದ್ದರೂ ರಾಜ್ಯ ಸರ್ಕಾರವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಇದು ರಾಜಕೀಯ ಪ್ರೇರಿತ ನಿರ್ಲಕ್ಷ್ಯ ಎಂದು ಆರೋಪಿಸಿದರು.
ಇದೇ ವೇಳೆ ಕಳೆದ ಕೆಲವು ತಿಂಗಳಲ್ಲಿ ಮಿಸ್ಟ್ರಲ್ ಎಐ, ಗೂಗಲ್, ಹಾರ್ವಿ, ಎಲೆವನ್‌ಲ್ಯಾಬ್ಸ್, ಡಿಸ್ನಿ, ಆಂಥ್ರೋಪಿಕ್ ಸೇರಿದಂತೆ ಜಾಗತಿಕ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, “ಇವು ನೈಜ ಹೂಡಿಕೆಗಳು. ಆದರೆ, ಸಾಧನೆಗಳನ್ನು ಮೌನಗೊಳಿಸಿ ನಷ್ಟಗಳನ್ನು ಮಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹೂಡಿಕೆ ಆಕರ್ಷಿಸುತ್ತಿದೆ, ವಿಸ್ತಾರಗೊಳ್ಳುತ್ತಿದೆ ಮತ್ತು ದೇಶದ ಬೆಳವಣಿಗೆ ದೃಷ್ಟಿಕೋನಕ್ಕೆ ಹೊಂದಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಮತ್ತು ಪೈ ಅವರು ರಾಜ್ಯದ ಪರ ನಿಲ್ಲಬೇಕಿದೆ. ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಜ್ಯಗಳ ಕೊಡುಗೆಗಳನ್ನು ಕೇಂದ್ರ ಸರ್ಕಾರ ಗುರುತಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement