

ಬೆಂಗಳೂರು: ರಾಜ್ಯ ಸೈಬರ್ ಕಮಾಂಡ್‌ಗೆ ಸೇರಿದ ಬೆಂಗಳೂರಿನ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸರು, ಜಯನಗರದಲ್ಲಿರುವ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿಯ ಹಜರತ್ ನಿಜಾಮುದ್ದೀನ್ ನಿವಾಸಿ ಇಮ್ರಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್, 16 ಸಿಮ್ ಕಾರ್ಡ್‌ಗಳು, ಮಲ್ಟಿವೇರ್ ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಲೆಟರ್‌ಹೆಡ್ ಹಾಗೂ ನೊಂದವರ ಹೆಸರು ಮತ್ತು ಮೊಬೈಲ್ ನಂಬರ್‌ಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರದ 9ನೇ ಬ್ಲಾಕ್‌ನಲ್ಲಿ ಮಲ್ಟಿವೇರ್ ಬ್ಯುಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿದ್ದ ಆರೋಪಿಗಳು, ಅನ್ಯ ರಾಜ್ಯಗಳ ಸುಮಾರು 15 ಜನರನ್ನು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರು ಸಾರ್ವಜನಿಕರಿಗೆ ಕರೆ ಮಾಡಿ 'ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ' ನಂಬಿಸುತ್ತಿದ್ದರು. ಇದಕ್ಕೆ ಒಪ್ಪಿ ಸ್ಪಂದಿಸುತ್ತಿದ್ದ ಸಾರ್ವಜನಿಕರಿಗೆ ಬ್ಯಾಂಕ್ ಖಾತೆಯ ವಿವರ ನೀಡಿ ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದರು. ನಂತರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗೊಳಗಾದವರೊಬ್ಬರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಂಚನೆಗೆ ಬಳಸಲಾಗಿದ್ದ ನಂಬರ್‌ನ ಲೊಕೇಷನ್ ಆಧರಿಸಿದ್ದ ಪೊಲೀಸರು ಜಯನಗರದ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸಿದಾಗ ಆರೋಪಿಗಳ ಸಂಚು ಬಯಲಾಗಿದೆ.
ಈ ಸಂಬಂಧ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66(ಆರ್) ಮತ್ತು ಬಿಎನ್‌ಎಸ್‌ನ 318 (4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಗೂಗಲ್ ಮೂಲಕ ಸ್ಟಾಕ್ ಮಾರುಕಟ್ಟೆ ಗ್ರಾಹಕರ ಡೇಟಾವನ್ನು ಪಡೆದುಕೊಂಡಿದ್ದಾರೆ. ಹೊರ ರಾಜ್ಯದವರಿಂದ ಬ್ಯಾಂಕ್ ಖಾತೆಗಳನ್ನು ಪಡೆದು, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಆ ಬ್ಯಾಂಕ್ ಖಾತೆಗಳು ಹಾಗೂ ನಂಬರ್‌ಗಳನ್ನು ವಂಚಿಸಲು ಬಳಸುತ್ತಿದ್ದರು. ಹಾಗೆ ವಂಚಿಸಿ ಬಂದಂತಹ ಹಣವನ್ನು ಹಲವಾರು ನಕಲಿ/ಮ್ಯೂಲ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ನಂತರ ವರ್ಗಾಯಿಸಿದ ಹಣವನ್ನು ತಮ್ಮ ಸಹಚರರಿಂದ ಎಟಿಎಂ ಮುಖಾಂತರ ಪಡೆದು ಹಂಚಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement