

ವಿವಾದಗಳು, ನೋವು, ದುಮ್ಮಾನಗಳ ಜೊತೆಗೆ 2025ನೇ ವರ್ಷ ಮುಗಿದಿದೆ. ಹೊಸ ವರ್ಷ ರಾಜ್ಯದ ಪಾಲಿಗೆ ಹೊಸತೇನನ್ನೋ ನೀಡಲಿದೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಮೂಡತೊಡಗಿದೆ.
ಹೊಸ ವರ್ಷ ಆರಂಭವಾಗಿದ್ದು, ಈ ಸಂದರ್ಭದಲ್ಲಿ 2026ರಲ್ಲಿ ಕರ್ನಾಟಕ ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹಲವು ಮಹತ್ವದ ಯೋಜನೆಗಳು ಹಾಗೂ ನಿರ್ಧಾರಗಳು ಜಾರಿಗೆ ಬರಲಿವೆ. ಅವುಗಳಲ್ಲಿ ಕೆಲವು ರಾಜ್ಯದ ಭವಿಷ್ಯದ ದಾರಿಗೆ ದಿಕ್ಕು ತೋರಿಸುವಂತಿವೆ. ಅವುಗಳ ಒಂದು ನೋಟ ಇಲ್ಲಿದೆ...
ಮೇಕೆದಾಟು ಯೋಜನೆ
ಕನಕಪುರ ಬಳಿಯ ಮೇಕೆದಾಟುನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯವನ್ನು ನಿರ್ಮಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿದ್ಯುತ್ ಉತ್ಪಾದಿಸುವುದರ ಜೊತೆಗೆ, ಈ ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಯೋಜನೆಯ ವಿರುದ್ಧ ತಮಿಳುನಾಡು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಈ ತೀರ್ಪನ್ನು ರಾಜ್ಯ ಸರ್ಕಾರ ಸ್ವಾಗತಿಸಿದೆ. ಯೋಜನೆಯ ವೆಚ್ಚವನ್ನು ನವೀಕರಿಸುವ ಮೂಲಕ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲು ನಿರ್ಧರಿಸಿದೆ. ಯೋಜನೆಯನ್ನು ತ್ವರಿತಗೊಳಿಸಲು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕರ ಅಡಿಯಲ್ಲಿ ತಂಡವನ್ನು ರಚಿಸಲಾಗಿದೆ.
ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ಕಾರ್ಯ ಪ್ರಮುಖ ಹಂತದಲ್ಲಿದೆ. ಆದರೆ, ಭೂಸ್ವಾಧೀನ ಸಮಸ್ಯೆ ಮತ್ತು ನೀರಿನ ಹಂಚಿಕೆ ಕುರಿತು ಕೇಂದ್ರ ಅಧಿಸೂಚನೆಗಳ ಕಾರಣದಿಂದ ವಿಳಂಬ ಉಂಟಾಗಿದೆ. ಮೂರು ವರ್ಷಗಳಲ್ಲಿ 1.33 ಲಕ್ಷ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದರೂ, ಹಣಕಾಸಿನ ಒತ್ತಡ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿ
ಈ ಪ್ರದೇಶದ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಮತ್ತು ಪರಿಹಾರಗಳನ್ನು ಶಿಫಾರಸು ಮಾಡಲು ಕಲ್ಯಾಣಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ರಚಿಸಿದ ಶಿಕ್ಷಣ ತಜ್ಞೆ ಛಾಯಾ ದೇಗಾಂವ್ಕರ್ ನೇತೃತ್ವದ ಸಮಿತಿಯು ಈ ತಿಂಗಳ ಆರಂಭದಲ್ಲಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. ಇದನ್ನು 2026 ರ ಮೊದಲಾರ್ಧದಲ್ಲಿ ಜಾರಿಗೆ ತರುವ ನಿರೀಕ್ಷೆಯಿದೆ.
ಡಾ. ಡಿ.ಎನ್. ನಂಜುಂಡಪ್ಪ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಿದ್ದರೂ ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಕುರಿತು ಮತ್ತೊಂದು ವರದಿಯನ್ನು ಜನವರಿಯಲ್ಲಿ ನಿರೀಕ್ಷಿಸಲಾಗಿದೆ. ಆಗಸ್ಟ್ 2025 ರಲ್ಲಿ ನಿಲ್ಲಿಸಲಾದ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗಳು 2026 ರ ಮೊದಲಾರ್ಧದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಅವಳಿಸುರಂಗ ರಸ್ತೆ ಯೋಜನೆ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಉದ್ದೇಶಿಸಿರುವ ವಿವಾದಾತ್ಮಕ ಅವಳಿ ಸುರಂಗ ರಸ್ತೆ ಯೋಜನೆಗೆಮುಂದಿನ ಕೆಲವು ತಿಂಗಳುಗಳಲ್ಲಿ ಚಾಲನೆ ದೊರಕುವ ಸಾಧ್ಯತೆಗಳಿವೆ. ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳ ಬಲವಾದ ವಿರೋಧದ ಹೊರತಾಗಿಯೂ, ರಾಜ್ಯ ಸರ್ಕಾರವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೆಚ್ಚಿನ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ. ಅದಾನಿ ಗುಂಪು ಗುತ್ತಿಗೆದಾರನಾಗಿ ಆಯ್ಕೆಯಾಗಿದೆ.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ
ಬೆಂಗಳೂರು ನಗರದಿಂದ ದೂರದಲ್ಲಿರುವ ವಿಮಾನ ನಿಲ್ದಾಣ ಮತ್ತು ಸಂಚಾರ ದಟ್ಟಣೆ ಸಮಸ್ಯೆಯಿಂದ ಹೈರಾಣಾಗಿರುವ ಜನತೆಗೆ 2ನೇ ವಿಮಾನ ನಿಲ್ದಾಣ ಶುಭ ಸುದ್ದಿಯಾಗಿದೆ. ಸರ್ಕಾರ ಈಗಾಗಲೇ ಟೆಂಡರ್ ಆಹ್ವಾನಿಸಿದ್ದು, ಐದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. 2026 ರ ದ್ವಿತೀಯಾರ್ಧದ ವೇಳೆಗೆ, ಸಂಭಾವ್ಯ ಮತ್ತು ಬಹುನಿರೀಕ್ಷಿತ ಎರಡನೇ ವಿಮಾನ ನಿಲ್ದಾಣ ಎಲ್ಲಿ ಬರಬಹುದು ಎಂಬುದ ಕುರಿತು ಸ್ಪಷ್ಟತೆಗಳು ಜನರಿಗೆ ಸಿಗಲಿದೆ.
GBA ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ
2025 ರಲ್ಲಿ ಯಾವುದೇ ದೊಡ್ಡ ಮಟ್ಟದ ಚುನಾವಣೆ ನಡೆಯಲಿಲ್ಲ. ಬಹುಮುಖ್ಯವಾಗಿ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ನಡೆಯಬೇಕಿತ್ತಾದರೂ ಮೀಸಲಾತಿ ಹಂಚಿಕೆ ವಿಳಂಬದಿಂದ ಸಾಧ್ಯವಾಗಲಿಲ್ಲ. ಚುನಾವಣೆಗೆಗಾಗಿ ಕಾದುಕುಳಿತವರಿಗೂ ಭಾರೀ ನಿರಾಸೆಯಾಗಿತ್ತು. ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ನಡೆಯುತ್ತಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು, 185 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸರಣಿಯಾಗಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದೆ. ಕಾಂಗ್ರೆಸ್ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಜೆಪಿ ಕೂಡ ಸದ್ಧಿಲ್ಲದೆ ತಯಾರಿ ನಡೆಸುತ್ತಿದೆ. ಒಟ್ಟು 369 ವಾರ್ಡ್‌ಗಳನ್ನು ರಚಿಸಿದ್ದು, ಹಿಂದಿನ ಚುನಾವಣೆಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಸರ್ಕಾರವು ವಾರ್ಡ್‌ವಾರು ಮೀಸಲಾತಿಯನ್ನು ನೀಡುತ್ತಿರುವುದರಿಂದ, ಬಹುನಿರೀಕ್ಷಿತ ಜಿಬಿಎ ಚುನಾವಣೆ 2026 ರ ಮಧ್ಯಭಾಗದಲ್ಲಿ ನಡೆಯುವ ಸಾಧ್ಯತೆಯಿದೆ.
Advertisement