

ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು 22 ವರ್ಷದ ಅಂಶ್ ಮೆಹ್ತಾ ಮತ್ತು ಪರ್ವ್ ರತಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಚೆನ್ನೈ ಮೂಲದವರು ಎಂದು ಅವರು ಹೇಳಿದ್ದಾರೆ.
ಘಟನೆಯ ಸಮಯದಲ್ಲಿ ಆರೋಪಿಗಳು ಮದ್ಯದ ಅಮಲಿನಲ್ಲಿದ್ದಿದ್ದರು.
ಪೊಲೀಸರ ಪ್ರಕಾರ, ವಿಧಾನಸೌಧ ಪೊಲೀಸ್ ಠಾಣೆಯ ಸಿಬ್ಬಂದಿ ರವಿ ಕೆ ಅವರು ಜನವರಿ 1, 2026 ರಂದು ಬೆಳಗಿನ ಜಾವ 1:40 ರ ಸುಮಾರಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ ನಾಲ್ಕು ಮಹಿಳೆಯರು ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಇಬ್ಬರು ಯುವಕರು ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಯುವಕರಿಗೆ ಹೊರಹೋಗುವಂತೆ ಸೂಚಿಸಿದಾಗ, ಅವರು ಪೊಲೀಸರ ಜಾಕೆಟ್ ಹರಿದು ಅವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರು. ನಂತರ ಅವರನ್ನು ಪೊಲೀಸ್ ಠಾಣೆಗೆ ಕರೆತಂದಾಗ, ಪೊಲೀಸ್ ಸಿಬ್ಬಂದಿ ಮತ್ತು ತನಿಖಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 132, 121(1) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement