

ಹುಬ್ಬಳ್ಳಿ: 17 ವರ್ಷದ ಅಪ್ರಾಪ್ತೆಯನ್ನು ಕಾರಿನಲ್ಲಿ ಅಪಹರಿಸಿ ಆಕೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಮಾಗಡಿಯಲ್ಲಿ ಯು ಟ್ಯೂಬರ್ ರವಿ ಜಮುನಾ ಬಂಧನ ಹಾಗೂ ಆತನ ಸಹಚರರಿಗೆ
ಗ್ರಾಮಸ್ಥರು ಒದೆ ನೀಡಿರುವ ಘಟನೆ ರಾಜ್ಯದಲ್ಲಿ ಹೆಚ್ಚು ಸುದ್ದಿಯಾಗಿರುವಂತೆಯೇ ಇದೀಗ ಹುಬ್ಬಳ್ಳಿಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ. 14 ರಿಂದ 15 ವರ್ಷದೊಳಗಿನ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಪೋಷಕರು ಇಲ್ಲದಿದ್ದಾಗ, ಅದೇ ಪ್ರದೇಶದಲ್ಲಿಯೇ ವಾಸಿಸುತ್ತಿದ್ದ ಹುಡುಗರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12-13 ವರ್ಷದ ಬಾಲಕಿಗೆ ರಕ್ಷಣೆ ನೀಡಲಾಗಿದ್ದು, ಮೂವರು ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. "ಅವರಲ್ಲಿ ಇಬ್ಬರು ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದರೆ, ಮತ್ತೋರ್ವ ಶಾಲೆಯನ್ನು ತೊರೆದಿದ್ದಾನೆ" ಎಂದು ಕುಮಾರ್ ಹೇಳಿದರು.
ಗ್ಯಾಂಗ್ ರೇಪ್ ವಿಡಿಯೋ ತಮ್ಮ ಬಳಿ ಇರುವುದಾಗಿ ಬಾಲಕರು ಬಾಲಕಿಗೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಅಗತ್ಯ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದರು.
Advertisement