

ಬೆಂಗಳೂರು: ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯವು ಚಿಕ್ಕಜಲ ಪೊಲೀಸ್ ಠಾಣೆಯ ಪಿಎಸ್ಐ ಶಿವಣ್ಣ ಮತ್ತು ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎಚ್.ವಿ. ಕೃಷ್ಣಮೂರ್ತಿ ಅವರ ಜಾಮೀನು ಅರ್ಜಿಗಳನ್ನು ನಿರಾಕರಿಸಿದೆ.
ಅಲ್ಪಾವಧಿಯಲ್ಲಿಯೇ ಸಿಕ್ಕಿಬಿದ್ದ ಪೊಲೀಸ್ ಠಾಣೆಯ ಐದನೇ ಅಧಿಕಾರಿ ಎಂಬುದು ದಾಖಲೆಗಳಿಂದ ತಿಳಿದುಬಂದಿದ್ದು, ಇದು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದರಿಂದ ನಾಗರಿಕರು ವ್ಯವಸ್ಥೆಯ ಮೇಲಿನ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಹೇಳಿದ್ದಾರೆ.
ಭ್ರಷ್ಟಾಚಾರ ಎಂಬುದು ಪೊಲೀಸ್ ಠಾಣೆಗಳಲ್ಲಿನ ಅಧಿಕೃತ ಕರ್ತವ್ಯಗಳ ಭಾಗವಾಗಿ ಹೋಗಿದೆ. ಈ ರೀತಿಯ ಸಾರ್ವಜನಿಕ ಸೇವೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಿಎಸ್ಐ ಶಿವಣ್ಣ ಡಿಸೆಂಬರ್ 23, 2025 ರಂದು ದೂರುದಾರರಿಂದ ರೂ. 2 ಲಕ್ಷ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ‘ಬಿ’ ವರದಿ ದಾಖಲಿಸಲು ರೂ. 1 ಲಕ್ಷ ಮತ್ತು ರೌಡಿ ಶೀಟ್ ಮುಚ್ಚಲು ರೂ. 1 ಲಕ್ಷ ಪಡೆದಿದ್ದಾರೆ, ಈ ಹಣದಲ್ಲಿ 50,000 ತನ್ನ ಬಳಿ ಇಟ್ಟುಕೊಂಜು ಇನ್ಸ್‌ಪೆಕ್ಟರ್‌ಗೆ 1.50 ಲಕ್ಷ ನೀಡಿದ್ದಾರೆಂಬುದು ದಾಖಲೆಯಿಂದ ತಿಳಿದುಬಂದಿದೆ.
ಮತ್ತೊಂದು ಪ್ರಕರಣದಲ್ಲಿ ನಗರದ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಎಚ್.ವಿ. ಕೃಷ್ಣ ಮೂರ್ತಿ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಡಿಸೆಂಬರ್ 24 ರಂದು ದೂರುದಾರ-ಹೋಟೆಲಿಯರ್‌ನಿಂದ 30,000 ರೂ.ಗಳನ್ನು ಸ್ವೀಕರಿಸಿದ ನಂತರ ಲೋಕಾಯುಕ್ತ ಪೊಲೀಸರು ಕೃಷ್ಣ ಮೂರ್ತಿ ಅವರನ್ನು ಬಂಧಿಸಿದ್ದರು. ಸಮಯ ಮಿತಿಯನ್ನು ಮೀರಿ ವ್ಯವಹಾರ ನಡೆಸಲು ಅವಕಾಶ ನೀಡಲು 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಆದರೆ. ವಿಚಾರಣೆ ವೇಳೆ ಅಧಿಕಾರಿ ತಾನು ಲಂಚ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
Advertisement