

ಬೆಂಗಳೂರು: ಶಿಕ್ಷಕರ ವೇತನ ಪಾವತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಹಣದ ಕೊರತೆಯಿಂದ ರಾಜ್ಯದ 600ಕ್ಕೂ ಹೆಚ್ಚು ಅನುದಾನ ರಹಿತ ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ.
ಪರಿಸ್ಥಿತಿಯ ಭೀಕರತೆ ಅರಿತ ಶಿಕ್ಷಕರು ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ವೇತನ ಬಿಡುಗಡೆ ಹಾಗೂ ಅನುದಾನರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದಾರೆ.
ಶಿವಮೊಗ್ಗದ ಬೊಮ್ಮನಕಟ್ಟೆಯ ಕೀರ್ತಿ ನಗರದಲ್ಲಿರುವ ವನಿತಾ ಕನ್ನಡ ಪ್ರೌಢಶಾಲೆಯ ಶಿಕ್ಷಕ ಸಂತೋಷ್ ಅವರು ಮಾತನಾಡಿ, 1995 ರಲ್ಲಿ ಅನುದಾನರಹಿತ ಶಾಲೆಯನ್ನು ಅನುದಾನಿತ ಶಾಲೆಯಾಗಿ ಪರಿವರ್ತಿಸಲಾಗಿತ್ತು. ನಂತರ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಿಂದ ಒಂದು ರೂಪಾಯಿ ಕೂಡ ಶುಲ್ಕ ಪಡೆಯುತ್ತಿಲ್ಲ, ಆದರೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತೇವೆ. ಶಾಲೆಗಳು ಮುಚ್ಚಿದರೆ, ಅನೇಕ ಶಿಕ್ಷಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಇದು 6,000 ಕ್ಕೂ ಹೆಚ್ಚು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸರ್ಕಾರವು ಅನುದಾನರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳಾಗಿ ಪರಿವರ್ತಿಸಬೇಕೆಂದು ಮನವಿ ಮಾಡುತ್ತಿದ್ದೇವೆಂದು ಹೇಳಿದ್ದಾರೆ.
ಈ ಹಿಂದೆಯೂ ಈ ವಿಚಾರಕ್ಕಾಗಿ ಪ್ರತಿಭಟನೆಯನ್ನೂ ನಡೆಸಿದ್ದೆವು. ಆದರೆ, ಯಾವುದೇ ಪ್ರತಿಫಲ ಸಿಗಲಿಲ್ಲ. ನಮ್ಮ ಶಾಲೆಯಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು, ಆದರೆ, ನೆರೆಹೊರೆಯಲ್ಲಿ ಹೆಚ್ಚಿನ ಅನುದಾನಿತ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳು ಕಾಣಿಸಿಕೊಂಡ ನಂತರ ಹೆಚ್ಚಿನವರು ಸ್ಥಳಾಂತರಗೊಂಡರು. ನಮ್ಮಲ್ಲಿ ಈಗ ಕೇವಲ 60 ವಿದ್ಯಾರ್ಥಿಗಳು ಮಾತ್ರ ಇದ್ದಾರೆಂದು ತಿಳಿಸಿದ್ದಾರೆ.
ಪ್ರತಿ ವರ್ಷವೂ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶೇಕಡಾ 90 ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ ಎಂದೂ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ಅಧ್ಯಕ್ಷ ಜಿ.ಸಿ. ಶಿವಪ್ಪ ಅವರು ಮಾತನಾಡಿ,ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಶಾಲೆಗಳನ್ನು ಮುಂಬರುವ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದು ಸಚಿವರು ಸದನದಲ್ಲಿ ತಿಳಿಸಿದ್ದಾರೆ. ಶನಿವಾರ ವೈಯಕ್ತಿಕವಾಗಿ ಭೇಟಿಯಾದ ಸಮಯದಲ್ಲಿಯೂ ಭರವಸೆ ನೀಡಿದ್ದಾರೆ. ಆದರೆ, ಈ ಹಿಂದೆ ಇದ್ದ ಸಚಿವರೂ ಕೂಡ ಇದೇ ರೀತಿಯ ಭರವಸೆ ನೀಡಿದ್ದರು. ಆದರೆ, ಈಡೇರಿಸಲಿಲ್ಲ ಎಂದು ಹೇಳಿದ್ದಾರೆ.
Advertisement