

ಬೆಳಗಾವಿ: ಬಳ್ಳಾರಿ ಗುಂಪು ಘರ್ಷಣೆ ಬಹಳ ಸಣ್ಣ ಘಟನೆ, ಆಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಘಟನೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಚಾರ, ಅದು ಬಹಳ ಸಣ್ಣ ಘಟನೆ, ಆಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ. ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಅಮಾನತಿಗೆ ಕಾರಣವಾಗಿದೆ. ಪ್ರಸ್ತುತ ಅಲ್ಲಿಯ ವಾತಾವರಣ ತಿಳಿಯಾಗಿದೆ. ಪೊಲೀಸರ ತನಿಖೆ ಬಳಿಕವಷ್ಟೇ ತಪ್ಪಿತಸ್ಥರ ಬಗ್ಗೆ ತಿಳಿಯಲಿದೆ ಎಂದು ಹೇಳಿದರು.
ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿ ಬಜೆಟ್ ನಂತರ ಅಧಿಕಾರದ ಹಸ್ತಾಂತರದ ಬಗ್ಗೆ ದೆಹಲಿಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನೀವು (ಮಾಧ್ಯಮದವರು) ಯಾರನ್ನ ತೆಗಿಬೇಕು ಅಂತಿರಾ, ಇಡಬೇಕು ಅಂತಿರಾ ಎಲ್ಲವೂ ನಿರ್ಧಾರ ಹೈಕಮಾಂಡ್ ಅವರದ್ದು. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿದೆ. ಹಾಗೆಂದು ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನು ಇಲ್ಲ. ಅವಕಾಶ ಬಂದಾಗ ನೋಡೋಣ. ಕ್ರಿಕೆಟ್‌ನಲ್ಲಿ ನಾನು ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ಅದೇ ರೀತಿ ರಾಜಕೀಯದಲ್ಲೂ ಗೂಗ್ಲಿ ಬಾಲ್ ಹಾಕಲೇಬೇಕು. ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
'ಕೆಪಿಸಿಸಿ ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನೋಡೋಣ, ಇನ್ನೂ ಸಿಎಂ ಕಪ್ ಎಂಬ ದೊಡ್ಡ ಮ್ಯಾಚ್ ಬಾಕಿ ಇದೆ. ಆ ರೇಸ್‌ನಲ್ಲಿ ನಾನಿಲ್ಲ. ಅದು ಯಾರಿಗೆ ಕೊಡಬೇಕು, ಬಿಡಬೇಕು ಎಂಬುದು ದೆಹಲಿ ಮತ್ತು ರಾಜ್ಯಮಟ್ಟದ ನಾಯಕರಿಗೆ ಬಿಟ್ಟದ್ದು. ಯಾರನ್ನು ಸಂಪುಟದಿಂದ ಕೈಬಿಡಬೇಕು ಅಂತಿದಾರೆ ಆ ನಿರ್ಧಾರ ಅವರದ್ದು. ಬಜೆಟ್ ನಂತರ ಅಧಿಕಾರ ಬದಲಾವಣೆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು ಎಂದು ತಿಳಿಸಿದರು.
ಕೇಂದ್ರ ಸರಕಾರ ಮನ್ರೇಗಾವನ್ನು ಬದಲಿಸಿದ್ದು, ಸರಿಯಲ್ಲ. ಇದು ಬಡವರ ವಿರೋಧಿ ಕಾನೂನಾಗಿದೆ. ಯಾವ ಪಂಚಾಯಿತಿಗೆ ಹಣ ಬಿಡುಗಡೆ ಮಾಡಬೇಕೆಂಬ ತೀರ್ಮಾನವನ್ನು ಕೇಂದ್ರ ಹೇಗೆ ಮಾಡಲು ಸಾಧ್ಯ? ದಿಲ್ಲಿಯಲ್ಲಿಕುಳಿತು ಯಾವುದೋ ಪಂಚಾಯಿತಿಗೆ ಹಣ ನೀಡಿದರೆ ಹೇಗೆ? ಮೊದಲು ಪಂಚಾಯಿತಿ ಮಟ್ಟದಲ್ಲಿ ಅಧಿಕಾರವಿತ್ತು. ಈಗ ದೆಹಲಿ ಕೇಂದ್ರಿತವಾಗಿದೆ ಎಂದು ಆರೋಪಿಸಿದರು.
Advertisement