

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಳ್ಳಾರಿ ಎಸ್‌ಪಿ ಪೋಸ್ಟ್ಗೆ ಎಷ್ಟು ಬಿಡ್ ಮಾಡಿದ್ರು? ಪವನ್ ನೆಜ್ಜೂರು ಡೆತ್ ನೋಟ್ನಲ್ಲಿ ಹಿರಿಯ ಅಧಿಕಾರಿಗಳ ಹೆಸರಿದೆ ಎನ್ನುವ ಮಾಹಿತಿಯಿದೆ. ಪವನ್ ಬರೆದ ಡೆತ್ ನೋಟ್ ಮುಚ್ಚಿಡ್ತಿರೋದೇಕೆ? ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಜ್ಜೂರ್ ಅವರ ತಂದೆ ಉದಯಶಂಕರ್ ಅವರ ಮೇಲೆ ಸರ್ಕಾರ ಒತ್ತಡ ಹೇರಿದ್ದು, ಇದರಿಂದಾಗಿ ತಮ್ಮ ಮಗ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಎಸ್‌ಪಿ ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ? ಅಮಾನತಾಗಿದ್ದೇಕೆ?. ಜಮೀರ್ ಅವರು ಬಳ್ಳಾರಿ ಎಸ್‌ಪಿ ಪೋಸ್ಟ್ಗೆ ಎಷ್ಟು ಬಿಡ್ ಮಾಡಿದ್ರು?. ಡೆತ್ ನೋಟ್ನಲ್ಲಿ ಹಿರಿಯ ಅಧಿಕಾರಿಗಳ ಹೆಸರಿದೆ ಎನ್ನುವ ಮಾಹಿತಿಯಿದೆ. ಪವನ್ ಬರೆದ ಡೆತ್ ನೋಟ್ ಮುಚ್ಚಿಡ್ತಿರೋದೇಕೆ? ಎಂದು ಪ್ರಶ್ನಿಸಿದ್ದಾರೆ.
ಆ ಡೆತ್ ನೋಟ್ನಲ್ಲಿ ಏನಿದೆ?. ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ?. ತುಮಕೂರು ಫಾರ್ಮ್ ಹೌಸ್‌ನಲ್ಲಿ ಏನಾಗುತ್ತಿದೆ?. ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ತಗೊಂಡ್ರು?. ಅವರ ತಂದೆಯಿಂದ ಪ್ರೆಸ್ ರಿಲೀಸ್ ಯಾಕೆ ಮಾಡಿದ್ರು?. ನಿಮ್ಮ ಗೂಂಡಾ ಶಾಸಕರನ್ನು ರಕ್ಷಣೆ ಮಾಡಲು ಹೊರಟಿದ್ದೀರಾ?. ಪವನ್ ನೆಜ್ಜೂರ್ಗೆ ನ್ಯಾಯ ಬೇಕಾಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಗ್ಗಿಸುವ ಕೆಲಸ ಆಗುತ್ತಿದೆ. ಬೆಂಗಳೂರಿನಲ್ಲಿ ಮನೆ ಕೊಡಲು ಬಿಡ್ಡಿಂಗ್ ನಡೀತಿದೆ. ಇಲ್ಲೂ ಬಿಡ್ಡಿಂಗ್ ಅಲ್ಲೂ ಬಿಡ್ಡಿಂಗ್. ಪವನ್ ಅಮಾನತು, ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ನೆಜ್ಜೂರ್ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರಿಂದ, ಖಾಸಗಿ ಆಸ್ಪತ್ರೆಯಲ್ಲಿ ಎನಿಮಾ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಧಿಕಾರಿಗಳು ದೌರ್ಜನ್ಯ ಎದುರಿಸುತ್ತಾರೆ. ಅಧಿಕಾರಿಗಳ ಮೇಲೆ ದೌರ್ಜನ್ಯ ನಿಲ್ಲಬೇಕು. ಸಿಎಂ ಅಧಿಕಾರಿಗಳ ಸಭೆ ಮಾಡಲ್ಲ ಯಾಕೆ?. ಅಧಿಕಾರಿಗಳ ಕಲೆಕ್ಷನ್ ಹೆಚ್ಚಾಗಿದೆ, ಸರ್ಕಾರ ಅವರಿಗೆ ಟಾರ್ಗೆಟ್ ಕೊಟ್ಟಿದೆ. ಬೆಂಗಳೂರಿನಲ್ಲಿ ಫ್ಲೈ ಒವರ್‌ಗಳಲ್ಲೂ ಟ್ರಾಫಿಕ್ ಜಾಮ್ ಇರುತ್ತೆ, ಯಾಕೆಂದರೆ ಅಲ್ಲೂ ಪೊಲೀಸರು ಕಲೆಕ್ಷನ್ ಮಾಡಿರುತ್ತಾರೆ. ರೆಡ್ಡಿಯವರು ಬಳ್ಳಾರಿಗೆ ಬಂದ ಮೇಲೆ ಗಲಾಟೆಗಳಾಗುತ್ತಿವೆ ಅಂತಿದ್ದಾರಲ್ಲ. ಮೊನ್ನೆ ಗಲಾಟೆ ಮಾಡಿದವರು ಯಾರು?. ಕಾಂಗ್ರೆಸ್ ಶಾಸಕ ತಾನೇ?. ಪವನ್ ನೆಜ್ಜೂರು ಗಲಾಟೆ ಮಧ್ಯೆ ಇದ್ರು. ಅವರು ಗಲಾಟೆ ಕಂಟ್ರೋಲ್ ಮಾಡ್ತಿದ್ರು. ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ, ಶಾಸಕರ ಫೋನ್ ಸ್ವೀಕರಿಸಲು ಆಗಿಲ್ಲ. ಗಲಾಟೆ ನಿಯಂತ್ರಿಸಬೇಕೋ? ಇವರ ಕಾಲ್ ಸ್ವೀಕರಿಸಬೇಕೋ?. ಈ ಕಾರಣಕ್ಕೆ ಅಮಾನತು ಮಾಡಿದ್ರಾ ಎಂದು ಪ್ರಶ್ನಿಸಿದರು.
ಈ ಕಾರಣಗಳಿಂದ ಅಧಿಕಾರಿಗಳ ಮೇಲೆ ಆರೋಪ ಮಾಡಿ ಅವರು ಸಾಯುವ ಸ್ಥಿತಿಗೆ ಈ ಸರ್ಕಾರ ದೂಡ್ತಿದೆ. ಆರೋಪ ಮಾಡೋದು, ಕೇಸ್ ಹಾಕೋದು ಇದೇ ಸರ್ಕಾರ ಮಾಡ್ತಿರೋ ಕೆಲಸ. ನಮ್ಮ ಅಧಿಕಾರಿಗಳೂ ಸಹ ಇದೇ ಕಾರಣಕ್ಕೆ ನೈತಿಕವಾಗಿ ಕುಗ್ಗುತ್ತಿದ್ದಾರೆ. ಡಿವೈಎಸ್‌ಪಿ ಗಣಪತಿ, ಡಿ.ಕೆ.ರವಿಗೆ ಏನು ಸ್ಟ್ರಾಟೆಜಿ ಮಾಡಿದ್ರೋ ಅದನ್ನೇ ಪವನ್ ನೆಜ್ಜೂರು ವಿಚಾರದಲ್ಲೂ ಸರ್ಕಾರ ಮಾಡಿದೆ. ಪೋಸ್ಟಿಂಗ್ ಆದ ಕೆಲವೇ ಗಂಟೆಯಲ್ಲಿ ಯಾರಾದ್ರೂ ಅಧಿಕಾರಿ ಕುಡಿದು ಮಲಗಿರ್ತಾರಾ?. ಸರ್ಕಾರ ಏನು ಹೇಳಲು ಹೊರಟಿದೆ?. ಯಾರನ್ನು ನಂಬಿಸಲು ಹೊರಟಿದೆ" ಎಂದು ಟೀಕಿಸಿದರು.
ಭರತ್ ರೆಡ್ಡಿಗೆ ಎಷ್ಟು ಅಹಂಕಾರ ಎಂದರೆ ಬಳ್ಳಾರಿಗೇ ಬೆಂಕಿ ಇಡುತ್ತೇನೆಂದು ಹೇಳಿದ್ದಾರೆ. ಇವರು ಮೊದಲ ಬಾರಿಯ ಶಾಸಕ, ಬೆಳೆಯಲು ಅವಕಾಶ ಇತ್ತು. ದ್ವೇಷ ಭಾಷಣ ಮಸೂದೆ ತರಲು ಹೊರಟಿದ್ದಾರಲ್ಲ. ಕೇಸ್ ಹಾಕಿ ಇವರ ಮೇಲೆ. ಬಿಜೆಪಿಯವರನ್ನು ಟಾರ್ಗೆಟ್ ಮಾಡಲು ದ್ವೇಷ ಭಾಷಣ ಬಿಲ್ ತರ್ತಿದ್ದಾರೆ. ಆದ್ರೆ ಇವರೇ ದ್ವೇಷ ಭಾಷಣ ಮಾಡುತ್ತಿದ್ದಾರೆ. ಪರಮೇಶ್ವರ್ ಅವರಿಗೆ ಬೇರೆಲ್ಲ ಗೊತ್ತಿರಲ್ಲ, ಏನೇ ಕೇಳಿದ್ರೂ ಗೊತ್ತಿಲ್ಲ ಗೊತ್ತಿಲ್ಲ ಅಂತಾರೆ. ಆದ್ರೆ ಬಳ್ಳಾರಿ ಎಸ್‌ಪಿ ಆವತ್ತು ಕುಡಿದು ಮಲಗಿದ್ರು ಅನ್ನೋದು ಗೊತ್ತಾಗುತ್ತೆ, ಹೇಗಿದೆ ನೋಡಿ ಎಂದು ಲೇವಡಿ ಮಾಡಿದರು.
Advertisement