

ಮೈಸೂರು: ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದೇ ಖುಷಿಯಲ್ಲಿ ಅವರ ಅಭಿಮಾನಿಗಳು ನಾಟಿಕೋಳಿ ಸಾರು, ರಾಗಿ ಮುದ್ದೆ ವಿತರಿಸಿ ಸಂಭ್ರಮಿಸಿದ್ದಾರೆ.
ಹೌದು.. ಈವರೆಗೆ ಸುದೀರ್ಘ ಸಿಎಂ ಹೆಗ್ಗಳಿಗೆ ಭಾಜನರಾಗಿದ್ದ ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಆಗಿದ್ದು, ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.
ಮಾತ್ರವಲ್ಲದೇ ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಲೇ ಎಲ್ಲರಿಗಿಂತ ಮುಂದಿದ್ದು, ಅವರ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಬರೋಬ್ಬರಿ 2,792 ದಿನಗಳ ಕಾಲ ಸಿಎಂ ಆಗಿ ಆಳ್ವಿಕೆ ನಡೆಸಿ ಸಿದ್ದರಾಮಯ್ಯ, ಸುದೀರ್ಘ ಅವಧಿಗೆ ಸಿಎಂ ಆಗಿದ್ದ ದೇವರಾಜ ಅರಸು ದಾಖಲೆ ಮುರಿದಿದ್ದಾರೆ.
ನಾಟಿಕೋಳಿ ಸಾರು, ರಾಗಿ ಮುದ್ದೆ ವಿತರಣೆ
ಇನ್ನು ಈ ದಿನವನ್ನು ಸಿದ್ದರಾಮಯ್ಯ ಅಭಿಮಾನಿಗಳು ನಾಡಿನ ಉದ್ದಗಲಕ್ಕೂ ಸಂಭ್ರಮಾಚರಣೆ ಮಾಡಿದ್ದಾರೆ. ಬೀದರ್ ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಬೀದರ್ ನಲ್ಲಿ ಸಿದ್ದು ಕಟೌಟ್
ಬೀದರ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ 6 ಅಡಿ ಕಟೌಟ್ ಹಿಡಿದು ಮೆರವಣಿಗೆ ಮಾಡಿದ್ದಾರೆ. ಬೀದರ್ ನಗರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ಬೊಮ್ಮಗುಂಡೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತದವರೆಗೆ ಮೆರವಣಿಗೆ ಮಾಡಿದ್ದಾರೆ. ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಮಂಡ್ಯದಲ್ಲಿ ಹಾಲಿನ ಅಭಿಷೇಕ
ಅಂತೆಯೇ ಮಂಡ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ವಿಶಿಷ್ಟವಾಗಿ ಅಭಿನಂದನೆಯನ್ನು ಅಭಿಮಾನಿಗಳು,ಜನರು ಸಲ್ಲಿಸಿದ್ದಾರೆ. ಪಟಾಕಿ ಸಿಡಿಸಿ, ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಾರಸಿಂಗನಹಳ್ಳಿ ಹಾಗೂ ಕೊರೆಮೇಗೌಡನಕೊಪ್ಪಲು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
2 ಕ್ವಿಂಟಾಲ್ ನಾಟಿ ಕೋಳಿ ಊಟ
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿಯ ಭಕ್ತನಪಾಳ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಫೇವರಿಟ್ ನಾಟಿ ಕೋಳಿ, ಮುದ್ದೆ ಊಟವನ್ನು ಸಿದ್ದಪಡಿಸಿ ಜನರಿಗೆ ಬಡಿಸಿದ್ದಾರೆ. 2 ಕ್ವಿಂಟಾಲ್ ನಾಟಿ ಕೋಳಿಯ ನಾನ್ ವೆಜ್ ಊಟವನ್ನು ಜನರಿಗೆ ಬಡಿಸಿದ್ದಾರೆ.
Advertisement