

ಬೆಂಗಳೂರು: ರಾಜ್ಯದ ಈವರಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜು ಅರಸು ಅವರ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮುರಿಯಲಿದ್ದು, ಇನ್ನೊಂದೇ ದಿನ ಅಂದರೆ ಬುಧವಾರ ಅರಸು ಅವರ ಹೆಸರಿನಲ್ಲಿ ಈವರೆಗೂ ಇದ್ದ ದಾಖಲೆಯನ್ನು ಮುರಿದು ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ಜ.6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2,792 ದಿನ ಪೂರೈಸಲಿದ್ದು, ಆ ಮೂಲಕ ದೇವರಾಜು ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ.
ದೇವರಾಜ ಅರಸು ಅವರು 1972ರ ಮಾ.20ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದರು. 1977ರ ಡಿ.31ರವರೆಗೆ ಅಂದರೆ 5 ವರ್ಷ 286 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 1978ರ ಫೆ.28ರಿಂದ 1980ರ ಜ.12ರವರೆಗೆ ಅಂದರೆ 1 ವರ್ಷ 318 ದಿನಗಳ ಕಾಲ ಸೇರಿ ಒಟ್ಟು 2,792 ದಿನಗಳಕಾಲ ಮುಖ್ಯಮಂತ್ರಿಯಾಗಿದ್ದರು.
ದೀರ್ಘ ಅವಧಿ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದ ದೇವರಾಜ ಅರಸು ಅವರ ಈ ದಾಖಲೆಯನ್ನು ನಾಲ್ಕೂವರೆ ದಶಕಗಳ ಬಳಿಕ ಸಿದ್ದರಾಮಯ್ಯ ಅವರು ಮುರಿಯುತ್ತಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಈ ದಾಖಲೆಯ ಕ್ಷಣ ಸಂಭ್ರಮಿಸಲು ರಾಜ್ಯದಾದ್ಯಂತ ಸಿದ್ಧತೆ ನಡೆಸಿದ್ದಾರೆ.ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್ ಗಳನ್ನು ಕಟ್ಟಿ ಸಂಭ್ರಮಿಸುತ್ತಿದ್ದಾರೆ.
ಜ.6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ಯುವ ಅಹಿಂತ ವತಿಯಿಂದ ನಾಟಿ ಕೋಳಿ ಔತಣ ಕೂಡ ಆಯೋಜಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಾಚರಣೆಗೆ ನಿರ್ಧರಿಸಲಾಗಿದೆ.
ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದ್ದು, ಇದರ ಪೋಸ್ಟರ್'ನ್ನು ವಿಧಾನಪರಿಷತ್ ಸದಸ್ಯ ಬಿ,ಕೆ.ಹರಿಪ್ರಸಾದ್ ಅವರು ಬಿಡುಗಡೆ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಡಿಕೆಶಿ ಶುಭ ಹಾರೈಕೆ
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ ಎಂದು ಹೇಳಿದರು.
ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂದು ಕೇಳಿದಾಗ, ಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿ ಎಂದು ತಿಳಿಸಿದರು.
ಶುಭ ದಿನಗಳು ಬರುತ್ತಿವೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಲಿ, ನಮಗೆ ಎಲ್ಲಾ ದಿನವೂ ಒಳ್ಳೆಯ ದಿನಗಳು, ನಿನ್ನೆ ಭೂತಕಾಲ, ನಾಳೆ ಭವಿಷ್ಯಕಾಲ, ಇಂದು ವರ್ತಮಾನ. ನಿಮ್ಮ ಜೊತೆ ಮಾತನಾಡುತ್ತಿರುವುದು ಒಳ್ಳೆಯ ದಿನ ಎಂದು ಚಟಾಕಿ ಹಾರಿಸಿದರು.
Advertisement