

ಬೆಂಗಳೂರು: ಕನ್ನಡಿಗರಿಗೆ ದೃಷ್ಟಿಗೊಂಬೆಯಂತೆ (ದೃಷ್ಟಿ ಆಗದೆ ಇರಲಿ) ಸೀರೆಯನ್ನುಟ್ಟ ಮಹಿಳೆಯೊಬ್ಬರ ಫೋಟೋ ಬಳಸುತ್ತಿದ್ದರು. ಕೆಲ ವರ್ಷಗಳಿಂದ ಈ ಫೋಟೋ ರಾಜ್ಯದಲ್ಲಿ ಫೇಮಸ್ ಆಗಿತ್ತು.
ಕೆಂಪು ಸೀರೆಯನ್ನುಟ್ಟು ದೊಡ್ಡ ದೊಡ್ಡ ಕಣ್ಣುಗಳನ್ನು ಬಿಟ್ಟು, ಹಣೆಗೆ ಅಗಲವಾಗಿ ಕುಂಕುಮವಿಟ್ಟು ಕೊಂಡಿರುವ ಮಹಿಳೆಯೊಬ್ಬರ ಫೋಟೋವನ್ನು ಕನ್ನಡಿಗರು ದೃಷ್ಟಿಗೊಂಬೆ ಫೋಟೋಗೆ ಬ್ರಾಂಡ್ ಅಂಬಾಸಿಡರ್ ಮಾಡಿದ್ದರು. ನಿರ್ಮಾಣ ಹಂತದ ಕಟ್ಟಡ ಹಾಗೂ ಹೊಲಗದ್ದೆಗಳಲ್ಲಿ ತಾವು ಬೆಳೆದ ಬೆಳೆಗೆ ದೃಷ್ಟಿ ತಾಗದಿರಲಿ ಎಂದು ಹಲವರು ಈ ಮಹಿಳೆಯ ಫೋಟೋ ಬಳಸುತ್ತಿದ್ದರು.
ಕೊನೆಗೂ ಈ ವೈರಲ್ ದೃಷ್ಟಿಗೊಂಬೆ ಮಹಿಳೆ ಯಾರು ಎನ್ನುವುದು ಈಗ ಪತ್ತೆಯಾಗಿದೆ. ಈ ಫೋಟೋ ಬೆಂಗಳೂರಿನ ಮಹಿಳೆಯೊಬ್ಬರ ಗಮನ ಸೆಳೆದಿದ್ದು, ಕೊನೆಗೂ ಈ ವೈರಲ್ ದೃಷ್ಟಿಗೊಂಬೆ ಮಹಿಳೆಯ ಹಿನ್ನಲೆ ಗೊತ್ತಾಗಿದೆ. ಯಾರಿವರು ಎನ್ನುವ ಕನ್ನಡಿಗರ ಪ್ರಶ್ನೆಗೂ ಉತ್ತರ ಸಿಕ್ಕಿದೆ.
ಇದು ಯೂಟ್ಯೂಬರ್ ನಿಹಾರಿಕಾ ರಾವ್ ಎಂಬುವರ ಫೋಟೋ ಇದಾಗಿದೆ. 2023ರಲ್ಲಿ ವೈರಲ್ ಆಗಿರುವ ವಿಡಿಯೋದಿಂದ ಈ ಫೋಟೋವನ್ನು ಕ್ರಾಫ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಇರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಮಹಿಳೆ ಮಾಡಿರುವ ಸರ್ಕಸ್ ಸಹ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈಚೆಗೆ ಈ ಮಹಿಳೆಯ ಫೋಟೋವನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೋಡಿದ್ದ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ್ದರು. ನಗರದ ಹೊರಗೆ ಪ್ರಯಾಣಿಸುವಾಗ ಈ ಫೋಟೋವನ್ನು ನಾನು ಪದೇ ಪದೇ ನೋಡಿದ್ದೇನೆ. ಅದರಲ್ಲೂ ಮುಖ್ಯವಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಈ ಫೋಟೋವನ್ನು ಬಳಸಿದ್ದಾರೆ. ಯಾರು ಈ ಸೀರೆಯನ್ನುಟ್ಟ ಮಹಿಳೆ ಎಂದು ಪೋಸ್ಟ್ ಮಾಡಿದ್ದರು.
ಮಹಿಳೆ ಆ ಫೋಟೋವನ್ನು ಕ್ಲಿಕ್ ಮಾಡಿ ಗೂಗಲ್ ಲೆನ್ಸ್ ಬಳಸಿ ಇವರು ಯಾರು ಎಂದು ತಿಳಿಯುವ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಜನವರಿ 5 ರಂದು ಈ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಕೆಲವೇ ದಿನಗಳಲ್ಲಿ, ಪೋಸ್ಟ್ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ AI-ರಚಿತ ಪ್ರತಿಕ್ರಿಯೆಯ ಪ್ರಕಾರ, ಪೋಸ್ಟರ್‌ನಲ್ಲಿರುವ ಮಹಿಳೆಯನ್ನು ಕರ್ನಾಟಕ ಮೂಲದ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಗುರುತಿಸಲಾಗಿದೆ. ಆಕೆಯ ಆಶ್ಚರ್ಯಕರ ಮುಖಭಾವವು 2023 ರಲ್ಲಿ ವೈರಲ್ ಆದ ವೀಡಿಯೊ ಕ್ಲಿಪ್‌ನಿಂದ ಹುಟ್ಟಿಕೊಂಡಿದೆ ಎಂದು ಹೇಳಿದೆ.
Advertisement