

ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ನಿರಂತರ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಯಾವುದೇ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಬಿಸಿ ತಟ್ಟದಂತೆ ಎಚ್ಚರ ವಹಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಚಿವರು, ಬೇಸಿಗೆಗಾಗಿ ಇಲಾಖೆಯ ಸಿದ್ಧತೆ ವಿವರಿಸುತ್ತಾ, ಬೇಡಿಕೆ ಮತ್ತು ಪೂರೈಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಕಷ್ಟು ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹಣೆ ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಹೇಳಿದರು.
ಮಾರ್ಚ್‌ನಿಂದ ಮೇ ವರೆಗೆ ನಿರೀಕ್ಷಿತ ವಿದ್ಯುತ್ ಬೇಡಿಕೆ ಪೂರೈಸಲು ಈಗಿನಿಂದಲೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ವಿನಿಮಯ ಅಥವಾ ದೀರ್ಘಾವಧಿ ಖರೀದಿ ಒಪ್ಪಂದಗಳ ಮೂಲಕ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ವ್ಯವಸ್ಥೆ ಮಾಡಬೇಕು ಮತ್ತು ಸಕ್ಕರೆ ಉತ್ಪಾದನೆಯೊಂದಿಗೆ ವಿದ್ಯುತ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಾದರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಬಹುದು. ಆದರೆ, ಯಾವುದೇ ಸಂದರ್ಭದಲ್ಲೂ ಕೊರತೆಯಾಗಬಾರದು ಎಂದು ಸಚಿವರು ನಿರ್ದೇಶನ ನೀಡಿರುವುದಾಗಿ ಅವರ ಕಚೇರಿಯಲ್ಲಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಕೃಷಿ ಪಂಪ್ ಸೆಟ್‌ಗಳಿಗೆ ಕುಸುಮ್-ಸಿ ಯೋಜನೆಯಡಿ ಹಗಲು ಹೊತ್ತಿನಲ್ಲಿ 7 ಗಂಟೆ ನಿರಂತರವಾಗಿ ವಿದ್ಯುತ್ ನೀಡಲಾಗುತ್ತಿದೆ. ಸದ್ಯ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿರುವ ಕಾರಣ, ಇತರ ಪ್ರದೇಶಗಳಲ್ಲಿನ ಕೃಷಿ ಪಂಪ್ ಸೆಟ್‌ಗಳಿಗೂ ಇದೇ ರೀತಿ ಹಗಲು ಹೊತ್ತಿನಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಯನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಲ್ಲಾ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
Advertisement