

ಮಂಗಳೂರು: ಕರಾವಳಿ, ಮಲೆನಾಡು ಭಾಗಗಳ ಜಿಲ್ಲೆಗಳಲ್ಲಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳೆರಡೂ ವಿಫಲವಾಗಿವೆ. ಇಲ್ಲಿ ಹೆಚ್ಚಿನ ಉದ್ಯೋಗಾವಕಾಶ ಇಲ್ಲದ ಕಾರಣ ಮಂಗಳೂರು ಭಾಗದ ಜನರು ದುಬೈ, ಮುಂಬೈ, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹೇರಳವಾಗಿ ಪ್ರಕೃತಿ ಸಂಪತ್ತು ಇದ್ದರೂ ಕೂಡ ಸರಿಯಾಗಿ ಬಳಕೆಯಾಗುತ್ತಿಲ್ಲ. ಇಲ್ಲಿನ ಶಾಸಕರ ಜೊತೆ ಮಾತನಾಡಿದ್ದೇನೆ. ಅವರು ಆಸಕ್ತಿ ತೋರಿಸಿದ್ದಾರೆ. ಟೂರಿಸಂ ಪಾಲಿಸಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇಲ್ಲಿಗೆ ಏನಾದರೂ ವಿಶೇಷ ಯೋಜನೆ ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ ಎಂದರು.
ನಿನ್ನೆ ಮಂಗಳೂರು ಏರ್ ಪೋರ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂಬೈ, ಬೆಂಗಳೂರಿನಲ್ಲಿರುವ ಉದ್ಯಮಿಗಳು ಸ್ವಂತ ಊರಿಗೆ ಬಂದು ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ. ಸಹಕಾರ ಕೊಡುತ್ತೇವೆ ಎಂದಿದ್ದಾರೆ. ಅವರ ಕೆಲಸ ಮಾಡಿದರೆ ಇಲ್ಲಿನ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ. ಸರ್ಕಾರ ಅವರಿಗೆ ಸಹಾಯ ಮಾಡುತ್ತದೆ ಎಂದರು.
ಕರಾವಳಿ ಟೂರಿಸಂ ಪಾಲಿಸಿ
ಕರಾವಳಿ ಭಾಗಕ್ಕೆ ಟೂರಿಸಂ ಪಾಲಿಸಿ ಮಾಡುತ್ತದೆ. ಉದ್ಯಮಿಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಇದಕ್ಕೆ ಖಾಸಗಿ ಸಹಭಾಗಿತ್ವ ಬೇಕಾಗುತ್ತದೆ ಎಂದರು.
ನರಿಂಗಾನದಲ್ಲಿ ಕಂಬಳಕ್ಕೆ ಚಾಲನೆ
ಮಂಗಳೂರು ಹತ್ತಿರ ಉಳ್ಳಾಲ ತಾಲೂಕಿನ ನರಿಂಗಾನದಲ್ಲಿ ಆಯೋಜಿಸಲಾಗಿದ್ದ ಲವ-ಕುಶ ಜೋಡುಕರೆ ಕಂಬಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು. ಕೋಣಗಳ ಓಟಕ್ಕೆ ಡಿಕೆಶಿ ಫಿದಾ ಆಗಿದ್ದು, ಸ್ಪೀಕರ್ ಯು.ಟಿ. ಖಾದರ್ ಅವರ ನಾಯಕತ್ವದಲ್ಲಿ ಕಂಬಳ ಆಯೋಜಿಸಲಾಗಿತ್ತು. ಇದೇ ವೇಳೆ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಮತ್ತು ಅದನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಡಿಸಿಎಂ ಬಳಿ ಬೇಡಿಕೆ ಇಡಲಾಯಿತು.
ಕರಾವಳಿಯ ಜಾನಪದ ಕ್ರೀಡೆ ಕಂಬಳವು ನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ಜೀವಂತ ಪರಂಪರೆ ಎಂದು ಶ್ಲಾಘಿಸಿದ್ದಾರೆ.
ಕಂಬಳದ ವೈಭವ ಕಣ್ತುಂಬಿಕೊಂಡ ಡಿಕೆಶಿ
ಕಂಬಳದ ಗದ್ದೆಯ ಬಳಿ ನಿಂತು ಕೋಣಗಳ ಓಟವನ್ನು ವೀಕ್ಷಿಸಿದ ಡಿಕೆಶಿ, ಕರಾವಳಿಯ ಜನರ ಉತ್ಸಾಹಕ್ಕೆ ತಲೆಬಾಗಿದರು. ಈ ವೇಳೆ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು ಮತ್ತು ಹಣೆಗೆ ತಿಲಕವನ್ನಿಟ್ಟು ಗೌರವಿಸಲಾಯಿತು. ಕಂಬಳ ವೀಕ್ಷಣೆ ಬಳಿಕ ಮಾತನಾಡಿದ ಅವರು, ಇಂತಹ ಗ್ರಾಮೀಣ ಕ್ರೀಡೆಗಳು ನಮ್ಮ ಮಣ್ಣಿನ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಅದ್ದೂರಿ ಆಯೋಜನೆ
ಈ ಬಾರಿಯ ನರಿಂಗಾನ ಕಂಬಳದಲ್ಲಿ ನೂರಾರು ಜೋಡಿ ಕೋಣಗಳು ಭಾಗವಹಿಸಿದ್ದು, ಸ್ಪರ್ಧೆಯ ರೋಚಕತೆ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಲವ ಮತ್ತು ಕುಶ ಎಂಬ ಹೆಸರಿನ ಜೋಡುಕರೆಗಳಲ್ಲಿ ನಡೆದ ಓಟವು ಕಂಬಳ ಪ್ರಿಯರಿಗೆ ರಸದೌತಣ ನೀಡಿತು.
Advertisement