

ಬೆಂಗಳೂರು: ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.
ಕೊಲೆಯಾದ ಟೆಕ್ಕಿ ಶರ್ಮಿಳಾ ಮೊಬೈಲ್ ಫೋನ್ ಕಾಣೆಯಾಗಿದ್ದು, ತೆರೆದ ಕಿಟಕಿ, ಬೆಂಕಿ ಅವಘಡಕ್ಕೆ ಕಾರಣವೇನೆಂದು ತಿಳಿದು ಬಂದಿರಲಿಲ್ಲ. ಆಕೆಯ ಮೊಬೈಲ್ ನಾಪತ್ತೆಯಾಗಿದ್ದು ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೇದಿಸಲು ಕಾರಣವಾಯಿತು.
ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ 18 ವರ್ಷದ ದ್ವಿತೀಯ ಪಿಯು ವಿದ್ಯಾರ್ಥಿಯನ್ನು ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕತ್ತು ಹಿಸುಕಿ ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಸಾಕ್ಷ್ಯಗಳನ್ನು ನಾಶಮಾಡಲು ಮತ್ತು ಕೊಲೆಯನ್ನು ಬೆಂಕಿ ಅಪಘಾತದ ಸಾವು ಎಂದು ಬಿಂಬಿಸಲು ಆತ ಪ್ರಯತ್ನಿಸಿದ್ದಾನೆ. ಕೊಡಗಿನ ಕರ್ನಲ್ ಕುರೈ ಎಂಬ ಆರೋಪಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ. ದಕ್ಷಿಣ ಕನ್ನಡ ಮೂಲದ ಶರ್ಮಿಳಾ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಶರ್ಮಿಳಾ ಮನೆಯ ಪಕ್ಕದಲ್ಲೇ ಆರೋಪಿಯೂ ಇದ್ದ.
ಜನವರಿ 3 ರಂದು ರಾತ್ರಿ 10.45 ರ ಸುಮಾರಿಗೆ ಅಪಾರ್ಟ್ಮೆಂಟ್ ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಪೊಲೀಸರಿಗೆ ಕರೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ, ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ರೂಮಿನ ಕಿಟಕಿ ತೆರೆದಿರುವುದು, ಫೋನ್ ನಾಪತ್ತೆಯಾಗಿರುವುದು ಹಾಗೂ ಬೆಂಕಿ ಹೊತ್ತುಕೊಳ್ಳಲು ಯಾವುದೇ ಮೂಲವಿಲ್ಲದಿರುವುದು ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿತ್ತು.
ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ಹಲವಾರು ಅನುಮಾನ ವ್ಯಕ್ತಪಡಿಸಿತು. ಶಾರ್ಟ್ ಸರ್ಕ್ಯೂಟ್ ಅಥವಾ ಅನಿಲ ಸ್ಫೋಟದಂತಹ ಯಾವುದೇ ಬೆಂಕಿಯ ಮೂಲವಿರಲಿಲ್ಲ. ಶವ ಪತ್ತೆಯಾದ ಕೋಣೆಯ ಕಿಟಕಿ ತೆರೆದಿದ್ದು, ಉಸಿರುಗಟ್ಟಿ ಸಾವು ಸಂಭವಿಸಿರುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತು. ಜೊತೆಗೆ ಶವ ಆಕೆಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿರಲಿಲ್ಲ ಬದಲಾಗಿ ಆಕೆಯ ಫ್ಲಾಟ್‌ಮೇಟ್‌ನ ಕೋಣೆಯಲ್ಲಿ ಕಂಡುಬಂದಿತ್ತು. ಘಟನೆ ನಡೆದಾಗ ಫ್ಲಾಟ್‌ಮೇಟ್ ಊರಿನಲ್ಲಿ ಇರಲಿಲ್ಲ.
ಇದಲ್ಲದೆ, ಶರ್ಮಿಳಾ ಮೊಬೈಲ್ ಫೋನ್ ಕಾಣೆಯಾಗಿತ್ತು. ಒಳಗಿನಿಂದ ಲಾಕ್ ಆಗಿದ್ದರಿಂದ ಆರೋಪಿ ಮನೆಗೆ ಹೇಗೆ ಪ್ರವೇಶಿಸಿದನೆಂದು ಪೊಲೀಸರಿಗೆ ಗೊಂದಲವಾಯಿತು. ಮೃತರ ಸ್ನೇಹಿತ ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು, ಹೀಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಂತ್ರಿಕ ಪುರಾವೆಗಳು ಮತ್ತು ಮೃತರ ಕಾಣೆಯಾದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದ ನಂತರ, ಪೊಲೀಸರು ಕುರೈ ಎಂಬಾತನನ್ನ ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಲೈಂಗಿಕ ಅನುಕೂಲ ಪಡೆಯುವ ಉದ್ದೇಶದಿಂದ ರಾತ್ರಿ 9 ಗಂಟೆಯ ಸುಮಾರಿಗೆ ಸ್ಲೈಡಿಂಗ್ ಕಿಟಕಿಯ ಮೂಲಕ ಮನೆಗೆ ಪ್ರವೇಶಿಸಿದ್ದಾಗಿ ಅವನು ಬಹಿರಂಗಪಡಿಸಿದನು. ಮೃತಳು ಸಹಕರಿಸಲು ನಿರಾಕರಿಸಿದಾಗ, ಅವಳ ಮೇಲೆ ಅತ್ಯಾಚಾರ ಮಾಡಿದನೆಂದು ಆರೋಪಿಸಲಾಗಿದೆ. ಅವಳು ವಿರೋಧಿಸಿದಾಗ, ಅವನು ಬಲವಂತವಾಗಿ ಅವಳ ಬಾಯಿ ಮತ್ತು ಮೂಗನ್ನು ತನ್ನ ಕೈಗಳಿಂದ ಮುಚ್ಚಿದ್ದರಿಂದ ಆಕೆ ಪ್ರಜ್ಞೆ ಕಳೆದುಕೊಂಡಳು.
ಅವಳಿಗೆ ರಕ್ತಸ್ರಾವದ ಗಾಯಗಳೂ ಆಗಿದ್ದವು. ತಾನು ಸಿಕ್ಕಿಬೀಳುತ್ತೇನೆ ಎಂದು ಹೆದರಿದ ಕುರೈ ಸಂತ್ರೆಸ್ತೆಯ ದೇಹ ಮತ್ತು ಕೋಣೆಯಲ್ಲಿದ್ದ ಇತರ ವಸ್ತುಗಳಿಗೆ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದನು. ಆಕೆಯ ಮೊಬೈಲ್ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದನು. ಪೊಲೀಸರು ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಶನಿವಾರ ಆತನನ್ನು ಬಂಧಿಸಲಾಯಿತು. ಪೊಲೀಸರು ಬಿಎನ್ಎಸ್ ಸೆಕ್ಷನ್ 103, 64(2), 67 ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement