
SSLC ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಬಂಧಿತರಲ್ಲಿ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಸೇರಿದ್ದಾರೆ. ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ದಾಖಲಿಸಿದ್ದರು. ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಬಳಸಲಾದ ನಿರ್ದಿಷ್ಟ ಶಿಕ್ಷಕರ ಲಾಗಿನ್ ಕೋಡ್‌ಗಳ ಮೂಲಕ ಸೋರಿಕೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ತುಮಕೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿರೋ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹೆಸರಿಟ್ಟಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಪರಮೇಶ್ವರ್ ಹೆಸರು ಇಡಲು ಮಹಾತ್ಮ ಗಾಂಧೀಜಿ ಹೆಸರನ್ನೇ ಕೈ ಬಿಡಲಾಗಿದೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿದೆ. ಇತ್ತ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪರಮೇಶ್ವರ್, ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಾವು ಮಹಾತ್ಮ ಗಾಂಧಿಯವರ ಹೆಸರು ಇರಬೇಕು ಅಂತ ನರೇಗಾ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಅಂಥಾದ್ದರಲ್ಲಿ ಕ್ರೀಡಾಂಗಣಕ್ಕಿರುವ ಮಹಾತ್ಮಾ ಗಾಂಧಿ ಹೆಸರನ್ನ ಯಾರಾದರೂ ತೆಗಿತಾರ ಎಂದು ಪ್ರಶ್ನಿಸಿದರು. ಪರಮೇಶ್ವರ್ ಅಲ್ಲ ಯಾರ ಹೆಸರನ್ನು ಈ ಕ್ರೀಡಾಂಗಣಕ್ಕೆ ಇಡೋದಿಲ್ಲ. ಅದೊಂದು ಒಳಾಂಗಣ ಸಂಕೀರ್ಣಕ್ಕೆ ನನ್ನ ಹೆಸರು ಇಟ್ಟಿದ್ದಾರೆ ಬಿಟ್ರೆ, ಇಡೀ ಸ್ಟೇಡಿಯಂ ಹೆಸರು ಬದಲಾಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದ ಮಹಿಳೆಯನ್ನ ಹೆಬ್ಬಗೋಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಹುಲಿಮಂಗಲದಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನ ತೆರವು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಶರ್ಬಾನು ಖತುನ್ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಮಹಿಳೆಯನ್ನು ಸರ್ಬಾನು ಖಾತುನ್ ಎಂದು ಗುರುತಿಸಲಾಗಿದೆ. ಇದೇವೇಳೆ ಬೇಗೂರು ಪೊಲೀಸರು 10 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬೆಂಗಳೂರು ನಗರ ಪೊಲೀಸರ ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಇದುವರೆಗೆ ಒಟ್ಟು 27 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಈ ಹಿಂದೆ ಮಡಿಕೆಯಲ್ಲಿ ಹಳೆಯ ಚಿನ್ನಾಭರಣ ಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇದೀಗ ಮತ್ತೆ ನಿಧಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಗ್ರಾಮದ ಬಸಪ್ಪ ಬಡಿಗೇರ ಎಂಬವರಿಗೆ ಮುತ್ತು, ಹವಳ, ನೀಲಮಣಿ, ಸ್ಫಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ವಸ್ತುಗಳುಳ್ಳ ನಿಧಿ ದೊರೆತಿದೆ. ಬಸಪ್ಪ ಬಡಿಗೇರ ಗ್ರಾಮದಲ್ಲಿ ಹಲವು ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಪುರಾತನ ಕಾಲದ ವಸ್ತುಗಳು ಅವರಿಗೆ ಸಿಕ್ಕಿದ್ದವು ಎನ್ನಲಾಗಿದೆ. ಅವುಗಳನ್ನೆಲ್ಲ ಅವರು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಇದೀಗ, ಲಕ್ಕುಂಡಿಯಲ್ಲಿ ಅಪಾರ ಚಿನ್ನ ಇದೆ ಎನ್ನುವ ನಂಬಿಕೆ ಬೆನ್ನಲ್ಲೇ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ವಾಹನ ಸವಾರರು ಇನ್ಮುಂದೆ ಸಂಚಾರ ನಿಯಮ ಪಾಲನೆ ಮಾಡದಿದ್ದರೆ, ದಂಡವಷ್ಟೇ ಅಲ್ಲ. FIR ಕೂಡ ದಾಖಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಲು ನಗರದ ಪೊಲೀಸರು ಮುಂದಾಗಿದ್ದಾರೆ. ಸಂಚಾರ ಸಿಗ್ನಲ್‌ಗಳನ್ನು ದಾಟುವುದು, ಏಕಮುಖ ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಜನನಿಬಿಡ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವಂತಹ ಉಲ್ಲಂಘನೆಗಳಿಗಾಗಿ ನ್ಯಾಯವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಅನೂಪ್ ಶೆಟ್ಟಿ ಹೇಳಿದ್ದಾರೆ. ಪೊಲೀಸ್ ಅಂಕಿ ಅಂಶಗಳ ಪ್ರಕಾರ 2025ರ ಜನವರಿಯಿಂದ ನವೆಂಬರ್‌ವರೆಗೆ ಬೆಂಗಳೂರಿನಲ್ಲಿ 6,62,447 ಸಿಗ್ನಲ್ ಜಂಪಿಂಗ್ ಪ್ರಕರಣಗಳು ಹಾಗೂ 3,02,962 ನೋ-ಎಂಟ್ರಿ ಉಲ್ಲಂಘನೆಗಳು ದಾಖಲಾಗಿವೆ.
Advertisement