

ಬೆಂಗಳೂರು: ಬೆಂಗಳೂರಿನ ಜನನಿಬಿಡ ರಸ್ತೆಯೊಂದರಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಭೀಕರ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶವನ್ನುಂಟು ಮಾಡಿದೆ.
ಮೃತ ಮಹಿಳೆಯನ್ನು 55 ವರ್ಷದ ದ್ರಾಕ್ಷಾಯಿಣಿ ಎಂದು ಗುರುತಿಸಲಾಗಿದೆ. ಬೆಂಗಳೂರು ಉತ್ತರದ ಕುದುರೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತನ್ನ ಮೊಮ್ಮಗನ ಶಾಲೆಗೆ ಮಧ್ಯಾಹ್ನದ ಊಟ ನೀಡಲು ಹೋಗಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಬೈಕ್ ನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿ, ಏಕಾಏಕಿ ಮಚ್ಚಿನಿಂದ ಆಕೆಯ ಕತ್ತನ್ನು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೃತದೇಹದ ಬಳಿ ಅಪರಾಧಕ್ಕೆ ಬಳಸಿದ ಮಚ್ಚು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡ ಹಗಲೇ ಈ ಘಟನೆ ನಡೆದಿದ್ದು, ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಘಟನೆಯ ನಂತರ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದ್ರಾಕ್ಷಾಯಿಣಿ ಕುಟುಂಬಸ್ಥರು ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ಕೊಲೆ ಪೂರ್ವಯೋಜಿತ ಎಂದು ಹೇಳಿದ್ದಾರೆ. ಪ್ರಕರಣ ದಾಖಲಾಗಿದ್ದು, ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
Advertisement