

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ಶನಿವಾರ ಭೀಕರ ಅಪಘಾತ ಸಂಭಿಸಿದ್ದು, ಒಂದೇ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಮೃತಪಟ್ಟಿದ್ದಾರೆ.
ಮೃತರನ್ನು ಪಿಯುಸಿ ವಿದ್ಯಾರ್ಥಿಗಳಾದ ತೌಸೀಪ್, ಶ್ರೀನಿವಾಸ್ ಮತ್ತು ಮಣಿಕಂಠ ಎಂದು ಗುರುತಿಸಲಾಗಿದ್ದು, ಇಂದು ವೀಕೆಂಡ್ ಹಿನ್ನೆಲೆಯಲ್ಲಿ ಮೂವರು ಬೈಕಿನಲ್ಲಿ ಲಾಂಗ್ ಡ್ರೈವ್ಗೆ ಹೊರಟ್ಟಿದ್ದರು. ಹೀಗೆ ಲಾಂಗ್ ಡ್ರೈವ್ ಹೋದ ಮೂವರು ಸ್ನೇಹಿತರ ಪಾಲಿಗೆ ಅದು ಲಾಸ್ಟ್ ಡ್ರೈವ್ ಆಗಿದ್ದು, ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಮೂವರು ದುರಂತ ಅಂತ್ಯವಾಗಿದ್ದಾರೆ.
ಇಂದು ಬೆಳಗ್ಗೆ 11: 20ರ ಸುಮಾರಿಗೆ ಈ ಮೂವರು ತೆರಳುತ್ತಿದ್ದ ಬೈಕ್ ಅಗಲಕೋಟೆ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿಗೆ ಬರ್ತಿದ್ದ ಲಾರಿಗೂ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಮೂವರ ಮೃತ ದೇಹ ಛಿದ್ರ-ಛಿದ್ರವಾಗಿವೆ.
ಮೃತ ಯುವಕರೆಲ್ಲಾ ಚಿಕ್ಕಜಾಲ, ಹುಣಸಮಾರನಹಳ್ಳಿ ಮೂಲದವರು ಎಂದು ತಿಳಿದು ಬಂದಿದ್ದು, ಈ ಯುವಕರೆಲ್ಲಾ ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಮಕ್ಕಳನ್ನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನ ಸ್ಥಳೀಯ ಆಸ್ಪತ್ರೆ ರವಾನೆ ಮಾಡಿದ್ದಾರೆ.
Advertisement